ADVERTISEMENT

ಯುಕೆಪಿ–3, ಎತ್ತಿನಹೊಳೆ ರಾಷ್ಟ್ರೀಯ ಯೋಜನೆ: ಕೇಂದ್ರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 19:44 IST
Last Updated 18 ಜನವರಿ 2021, 19:44 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಕೃಷ್ಣಾ ಮೇಲ್ದಂಡೆ ಯೋಜನೆ–3’ ನೀರಾವರಿ ಯೋಜನೆ ಮತ್ತು ‘ಎತ್ತಿನಹೊಳೆ’ ಕುಡಿಯುವ ನೀರಿನ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಯೋಜನಾ ವೆಚ್ಚದ ಶೇ 90 ರಷ್ಟು ಹಣಕಾಸು ನೆರವು ನೀಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸೋಮವಾರ ವಿವಿಧ ರಾಜ್ಯಗಳ ಹಣಕಾಸು ಸಚಿವರ ಜತೆ ನಡೆಸಿದ ಬಜೆಟ್‌ ಪೂರ್ವಭಾವಿ ವಿಡಿಯೊ ಸಂವಾದದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಪ್ರಸ್ತಾವನೆ ಮಂಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ–3 ಅನ್ನು ₹ 51,148 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಸುಮಾರು 5.94 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗುವುದು. ಅಂದಾಜು 1,21,90,982 ಜನರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ವಿವರಿಸಿದರು.

ADVERTISEMENT

ಅದೇ ರೀತಿ ಎತ್ತಿನಹೊಳೆ ಯೋಜನೆಯ ಮೂಲಕ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ₹12,912 ಕೋಟಿ ವೆಚ್ಚ ಮಾಡಿದೆ ಎಂದು ಅವರು ಹೇಳಿದರು.

ವಿಶೇಷ ಅನುದಾನಕ್ಕೆ ಮನವಿ:

15ನೇ ಹಣಕಾಸು ಆಯೋಗ 2020–21ನೇ ಸಾಲಿನ ವರದಿಯಲ್ಲಿ ಕರ್ನಾಟಕಕ್ಕೆ ₹ 5,495 ಕೋಟಿ ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸ್ಸನ್ನು ಒಪ್ಪಿಕೊಂಡು 2021–22 ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಪ್ರಕಟಿಸಬೇಕು. ಇಡೀ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯವಾಗಿದೆ ಎಂದು ಬಸವರಾಜ್‌ ಬೊಮ್ಮಾಯಿ ತಿಳಿಸಿದರು.

ರಾಜ್ಯಗಳಿಗೆ ಹಣಕಾಸು ಹಂಚಿಕೆಗೆ 15ನೇ ಹಣಕಾಸು ಆಯೋಗ ನೀಡಿರುವ ಹಂಚಿಕೆ ಸೂತ್ರವನ್ನು ಶೀಘ್ರ ಒಪ್ಪಿದರೆ, ಅದಕ್ಕೆ ಅನುಗುಣವಾಗಿ ರಾಜ್ಯಗಳೂ ಬಜೆಟ್‌ಗೆ ಸಿದ್ಧತೆ ನಡೆಸಲು ಅನುಕೂಲ ಆಗಲಿದೆ ಎಂದು ಕೇಂದ್ರ ಸಚಿವೆಯ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.