ADVERTISEMENT

ಎತ್ತಿನಹೊಳೆ ಯೋಜನೆ 2027ಕ್ಕೆ ಪೂರ್ಣ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:41 IST
Last Updated 2 ಸೆಪ್ಟೆಂಬರ್ 2024, 15:41 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: ‘‍ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದ ಸ್ವಲ್ಪ ಭಾಗ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಅನುಕೂಲ ಆಗಲಿರುವ ಎತ್ತಿನಹೊಳೆ ಯೋಜನೆ 2027ಕ್ಕೆ ಪೂರ್ಣಗೊಳ್ಳಲಿದೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಯೋಜನೆಯ ಪ್ರಮುಖ ಜಾಗದಲ್ಲಿ ನೀರು ಮೇಲಕ್ಕೆ ಎತ್ತುವ ಪಂಪ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 6ರಂದು ಮಧ್ಯಾಹ್ನ 12.05ಕ್ಕೆ ಚಾಲನೆ ನೀಡಲಿದ್ದಾರೆ. ಕೆಲವು ಪ್ರಮುಖ ಭಾಗಗಳಲ್ಲಿ 10.30ರ ಒಳಗೆ ಸಚಿವರು ಚಾಲನೆ ನೀಡಲಿದ್ದಾರೆ’ ಎಂದರು.

ADVERTISEMENT

‘ಪ್ರಸ್ತುತ ಪಂಪ್ ಮಾಡಿದ ನೀರನ್ನು 132 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುವುದು. ಅರಣ್ಯ ಭೂಮಿ ತಕರಾರು ಬಗೆಹರಿಸಿ ಮುಂದಿನ 140 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ, ತುಮಕೂರಿಗೆ ನೀರು ಹರಿಸಲಾಗುವುದು’ ಎಂದು ಹೇಳಿದರು.

‘ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4ರಿಂದ 32 ಕಿ.ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಲಾಗಿದೆ. ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ನ. 1ರ ವೇಳೆಗೆ ಸುಮಾರು 5 ಟಿಎಂಸಿ ಅಡಿ ನೀರು ಮೇಲಕ್ಕೆ ಎತ್ತಲಾಗುವುದು. ಅರಣ್ಯ ಇಲಾಖೆಯಿಂದ 502 ಎಕರೆ ಜಮೀನು ಪಡೆಯಬೇಕಾಗಿದ್ದು, ಅದಕ್ಕೆ ಬದಲು 452 ಎಕರೆ ಜಮೀನು ನೀಡಿದ್ದೇವೆ. ಮುಂದಿನ ನಾಲ್ಕು ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆ ನಂತರ ತುಮಕೂರು ಭಾಗದ ಕೆಲಸ ತ್ವರಿತವಾಗಿ ಮುಗಿಸಲಾಗುವುದು’ ಎಂದು ತಿಳಿಸಿದರು.

‘ಯೋಜನೆಯ ಒಟ್ಟು 24 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದು. ಪ್ರಾಯೋಗಿಕ ಪರೀಕ್ಷೆ ನಡೆಸುವುದಕ್ಕೆ ಮೊದಲು ಒಂದಷ್ಟು ಕಡೆ ನೀರು ಸೋರಿಕೆಯಾಗಿತ್ತು. ಅದನ್ನು ಸರಿಪಡಿಸಲಾಗಿದೆ. ಸಣ್ಣ, ನದಿ, ತೊರೆಗಳಿಂದ ಎತ್ತುವ ನೀರನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಯನ ಮಾಡಲು ಪ್ರತ್ಯೇಕ ತಂಡ ರಚಿಸಲಾಗಿದೆ’ ಎಂದು ಹೇಳಿದರು.

‘ತುಂಗಭದ್ರಾ ಕ್ರಸ್ಟ್ ಗೇಟ್ ತುಂಡಾದ ಅವಘಡ ಸಂಭವಿಸಿದ ಮೇಲೆ ಸೆಕ್ಷನ್ 38, 39 ಅಣೆಕಟ್ಟು ಸಂರಕ್ಷಣಾ ಕಾಯ್ದೆ ಪ್ರಕಾರ, ಸಿಡಬ್ಲ್ಯುಸಿ ಮಾಜಿ ಅಧ್ಯಕ್ಷ ಎ.ಕೆ. ಬಜಾಜ್ ಅವರ ಅಧ್ಯಕ್ಷತೆಯಲ್ಲಿ ನೂತನವಾಗಿ ಅಣೆಕಟ್ಟು ಸಂರಕ್ಷಣೆ ಪರಿಶೀಲನಾ ಸಮಿತಿ ರಚಿಸಲಾಗಿದೆ’ ಎಂದರು.

‘ಕಬಿನಿ ಅಣೆಕಟ್ಟು ಕೂಡ ಅಪಾಯದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಸಮಿತಿ ಅಲ್ಲಿಗೂ ತೆರಳಿ ನೀರಿನ ಆಳಕ್ಕೆ ಇಳಿದು ಪರಿಶೀಲನೆ ನಡೆಸಿದೆ. ಯಾವುದಾದರೂ ತೊಂದರೆ ಇದ್ದರೆ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.