ADVERTISEMENT

ಸಕಲೇಶಪುರ | ಎತ್ತಿನಹೊಳೆ: ಚೆಕ್‌ಡ್ಯಾಂನಿಂದ ಪ್ರಾಯೋಗಿಕವಾಗಿ ಹರಿದ ನೀರು

ಹಲವೆಡೆ ಸೋರಿಕೆ, ರಸ್ತೆ, ಸಾರ್ವಜನಿಕ, ಖಾಸಗಿ ಆಸ್ತಿಪಾಸ್ತಿ ಹಾನಿ

ಜಾನೆಕೆರೆ ಆರ್‌.ಪರಮೇಶ್‌
Published 29 ನವೆಂಬರ್ 2023, 4:14 IST
Last Updated 29 ನವೆಂಬರ್ 2023, 4:14 IST
ಸಕಲೇಶಪುರ ತಾಲ್ಲೂಕು ಕುಂಬರಡಿ ಗ್ರಾಮದ ಎತ್ತಿನಹಳ್ಳ ಬಳಿ ಪೈಪ್‌ಲೈನ್‌ ವಾಲ್‌ನಲ್ಲಿ ಸೋರಿಕೆ ಆಗುತ್ತಿರುವುದು.
ಸಕಲೇಶಪುರ ತಾಲ್ಲೂಕು ಕುಂಬರಡಿ ಗ್ರಾಮದ ಎತ್ತಿನಹಳ್ಳ ಬಳಿ ಪೈಪ್‌ಲೈನ್‌ ವಾಲ್‌ನಲ್ಲಿ ಸೋರಿಕೆ ಆಗುತ್ತಿರುವುದು.   

ಸಕಲೇಶಪುರ: ಎತ್ತಿನಹೊಳೆ ಯೋಜನೆಯ ಒಂದು ಚೆಕ್‌ಡ್ಯಾಂನಿಂದ ಮೂರು ದಿನಗಳಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಈ ವೇಳೆ ಹಲವೆಡೆ ಭಾರೀ ಪ್ರಮಾಣದ ಸೋರಿಕೆ ಆಗಿದ್ದು, ರಸ್ತೆ ಹಾಗೂ ಇನ್ನಿತರ ಪ್ರದೇಶಗಳಿಗೆ ಹಾನಿಯಾಗಿದೆ.

ಸುಮಾರು 6 ಕಿ.ಮೀ. ಉದ್ದ ಪೈಪ್‌ಲೈನ್ ಮೂಲಕ ಕಾಡಮನೆ ಚೆಕ್‌ಡ್ಯಾಂ 5 ರ ಒಂದು ಪಂಪ್‌ನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಗದ್ದೆ, ದೇಖಲ, ಕುಂಬರಡಿ ಸೇರಿದಂತೆ ಹಲವೆಡೆ ಪೈಪ್‌ಗಳಿಂದ ಭಾರೀ ಪ್ರಮಾಣದ ನೀರು ಸೋರಿಕೆ ಆಗಿದೆ.

ಪೈಪ್‌ ಸೋರಿಕೆಯ ರಭಸಕ್ಕೆ ದೇಖಲ ಗ್ರಾಮದಲ್ಲಿ ಮುಖ್ಯ ರಸ್ತೆಯೊಂದು ಕುಸಿದಿದೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಕಾಫಿ ಮಂಡಳಿಯ ಜೀಪು ಈ ಗುಂಡಿಯೊಳಗೆ ಸಿಕ್ಕಿಕೊಂಡು ಹರಸಾಹಸದಿಂದ ಮೇಲೆತ್ತಲಾಗಿದೆ.

ADVERTISEMENT

ಕಾಡಮನೆಯಿಂದ ದೊಡ್ಡನಾಗರ ನೀರು ಶೇಖರಣಾ ಕೇಂದ್ರದವರೆಗೆ, ಕಾಡಮನೆ, ಮಲ್ಲಾಗದ್ದೆ, ನಡಹಳ್ಳಿ, ದೇಖಲ, ಕುಂಬರಡಿ, ಹೆಬ್ಬಸಾಲೆ ಮುಖ್ಯ ರಸ್ತೆಯ ಬದಿಯಲ್ಲಿಯೇ ಪೈಪ್‌ಗಳನ್ನು ಜೋಡಿಸಲಾಗಿದೆ.

‘ಭೂಮಿಯೊಳಗೆ ಜೋಡಣೆ ಮಾಡಿರುವ ಪೈಪ್‌ನಲ್ಲಿ ನೀರು ಹರಿಯುವ ವೇಗ ಹಾಗೂ ಒತ್ತಡಕ್ಕೆ ಮೇಲ್ಬಾಗದ ಭೂಮಿ ನಡುಗುತ್ತದೆ. ಮನೆಯೇ ಅದುರುತ್ತಿದ್ದು, ಭಯದಿಂದ ಮನೆಯೊಳಗಿನಿಂದ ಹೊರಗೆ ಓಡಿ ಬಂದಿದ್ದಾಗಿ’ ದೇಖಲ ಗ್ರಾಮಸ್ಥರು ಹೇಳಿದ್ದಾರೆ.

ಒಟ್ಟು 8 ಪಂಪ್‌ಗಳಿಂದ, 5 ಪೈಪ್‌ಗಳಲ್ಲಿ ದೊಡ್ಡನಾಗರ ಶೇಖರಣಾ ಕೇಂದ್ರಕ್ಕೆ ನೀರು ಹರಿಸಲಾಗುತ್ತದೆ. ಕಾಡಮನೆ ವೈರ್‌ 5 ರಿಂದ ಡಿಸಿ 2 ರವರೆಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ನೀರು ಯಾವ ರೀತಿ ಹರಿಯುತ್ತದೆ ಎಂಬುದನ್ನು ಪರೀಕ್ಷೆ ಮಾಡಲು, ಈ ಮಾರ್ಗದ 6 ಕಿ.ಮೀ. ಪ್ರದೇಶದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.

‘ಭೂಮಿಯೊಳಗೆ ಪೈಪ್‌ಗಳನ್ನು ಜೋಡಣೆ ಮಾಡಿ 5 –6 ವರ್ಷಗಳಾಗಿವೆ. ಹಾಗಾಗಿ ಕೆಲವೆಡೆ ವೆಲ್ಡಿಂಗ್‌ ಬಿಟ್ಟು ಹೋಗಿರುವುದು, ಮತ್ತೆ ಕೆಲವು ತಾಂತ್ರಿಕ ಕಾರಣಗಳಿಂದ ಕೆಲವೆಡೆ ನೀರು ಸೋರಿಕೆ ಆಗಿದೆ. ನೀರು ಹರಿಸಿ ಪರೀಕ್ಷೆ ಮಾಡುವುದರಿಂದ ಇಂತಹ ಸೋರಿಕೆ, ನೀರು ಹರಿವಿನ ಒತ್ತಡ ಗೊತ್ತಾಗುತ್ತದೆ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ವೆಂಕಟೇಶ್ ತಿಳಿಸಿದ್ದಾರೆ.

‘ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಲಾಗಿದೆ. ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುತ್ತಿದೆ. ರಸ್ತೆ ಹಾಗೂ ಇನ್ನಿತರ ಯಾವುದೇ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿ ಆಗಿದ್ದರೆ ದುರಸ್ತಿ ಮಾಡಲಾಗುವುದು. ಈ ಬಗ್ಗೆ ಸುತ್ತಲಿನ ಗ್ರಾಮಸ್ಥರು ಆತಂಕ ಪಡುವುದು ಬೇಡ. ಯಾವುದೇ ಸಮಸ್ಯೆಗಳಿದ್ದರೂ ಇಲಾಖೆ ತಕ್ಷಣ ಸ್ಪಂದಿಸುತ್ತದೆ’ ಎಂದು ಭರವಸೆ ನೀಡಿದ್ದಾರೆ.

ಎತ್ತಿನಹೊಳೆ ಪ್ರಾಯೋಗಿಕ ನೀರು ಹರಿಸಿದಾಗ ಸಕಲೇಶಪುರ ತಾಲ್ಲೂಕು ದೇಖಲ ಗ್ರಾಮದಲ್ಲಿ ಪೈಪ್‌ನಿಂದ ಸೋರಿಕೆ ಆಗಿ ರಸ್ತೆ ಕುಸಿದಿದೆ.
ಒಂದು ಪಂಪ್‌ನಿಂದ ನೀರು ಹರಿಸಿದಾಗ ಇಷ್ಟು ಹಾನಿಯಾಗಿದೆ. ಇನ್ನು 8 ಪಂಪ್‌ಗಳಿಂದ 5 ಪೈಪ್‌ಲೈನ್‌ಗಳಲ್ಲಿ ನೀರು ಹರಿಸಿದರೆ ಪರಿಸ್ಥಿತಿ ಏನಾಗುತ್ತದೆ ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ.
–ಮೇಘರಾಜ್‌ ಹೆಬ್ಬಸಾಲೆ ಗ್ರಾ.ಪಂ. ಮಾಜಿ ಸದಸ್ಯ
ಯೋಜನೆಯ ಬಹುಪಾಲು ನೀರು ನಮ್ಮೂರಿನಿಂದಲೇ ಹರಿಸುತ್ತಿದ್ದರೂ ಈ ಭಾಗದ ರಸ್ತೆ ಕಿರು ಸೇತುವೆ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ. ಇರುವ ರಸ್ತೆ ಹಾಗೂ ಪರಿಸರ ಯೋಜನೆಯಿಂದ ನಾಶವಾಗಿದೆ
ಕೆ.ಬಿ. ಲಕ್ಷ್ಮಣ್‌ ಹೆಬ್ಬಸಾಲೆ ಗ್ರಾ.ಪಂ. ಮಾಜಿ ಸದಸ್ಯ
ಪ್ರಾಯೋಗಿಕವಾಗಿ ನೀರು ಹರಿಸಿದಾಗ ಇಷ್ಟು ತೊಂದರೆಯಾಗಿದೆ. ಮಳೆಗಾಲದಲ್ಲಿ ತಿಂಗಳುಗಟ್ಟಲೆ ಹರಿಸಿದರೆ ಮನೆ ರಸ್ತೆ ಆಸ್ತಿಪಾಸ್ತಿ ಕೊಚ್ಚಿ ಹೋಗುತ್ತದೆಯೋ ಗೊತ್ತಿಲ್ಲ. ಗುಣಮಟ್ಟದ ಕಾಮಗಾರಿ ಆಗಿಲ್ಲ.
ದಯಾನಂದ ಹೆಬ್ಬಸಾಲೆ ಗ್ರಾ.ಪಂ. ಉಪಾಧ್ಯಕ್ಷ

ಪ್ರತಿಭಟನೆಗೆ ಸಜ್ಜು

‘ಪೈಪ್‌ಲೈನ್‌ನಿಂದ ನೀರು ಸೋರಿಕೆ ಭೂಮಿ ಕೆಳಗೆ ಪೈಪ್‌ನಲ್ಲಿ ರಭಸವಾಗಿ ಹರಿಯುವ ನೀರಿನಿಂದ ಭೂಮಿ ಅದುರುತ್ತಿದೆ. ಭೂಮಿಯೇ ಇಬ್ಬಾಗ ಆಗುವಂತಹ ಅನುಭವ ಆಗುತ್ತಿದೆ. ಕಳಪೆ ಕಾಮಗಾರಿ ಮಾಡಿರುವುದರಿಂದ ಯಾವ ಸಂದರ್ಭದಲ್ಲಿ ಏನು ಅನಾಹುತ ಸಂಭವಿಸುತ್ತದೆಯೋ ಗೊತ್ತಿಲ್ಲ. ಈ ಬಗ್ಗೆ ನಿರಂತರ ಪ್ರತಿಭಟನೆ ಮಾಡುತ್ತೇವೆ’ ಎಂದು ಡಹಳ್ಳಿ ಕುಂಬರಡಿ ಹೆಬ್ಬಸಾಲೆ ಗುರ್ಜೇನಹಳ್ಳಿ ಸವಾಲಾ ಮಲ್ಲೇಗದ್ದೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.