ADVERTISEMENT

ನಾಡು ನುಡಿಗಾಗಿ ಹೋರಾಡೋಣ, ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 8:06 IST
Last Updated 10 ಜುಲೈ 2021, 8:06 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಇತ್ತೀಚಿನ ರಾಜಕೀಯ ಕದನಕ್ಕೆ ವಿರಾಮ ಹಾಡಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ನಾಡು ನುಡಿಗಾಗಿ ಹೋರಾಡೋಣ, ಬೇರೆಲ್ಲ ವಿಷಯಗಳನ್ನು ಉಪೇಕ್ಷಿಸೋಣ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ಕಾರ್ಯಕರ್ತ ಬಂಧುಗಳೇ, ಅಭಿಮಾನಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ.ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ' ಎಂದರು.

ಇದನ್ನೂ ಓದಿ:

'ಪ್ರಾದೇಶಿಕ ಪಕ್ಷವಾಗಿ ನಾವು ಮಾತಾಡುವುದಿದೆ, ಮಾತಾಡೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ. ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ನಾವು ದೊಡ್ಡದಾಗಿ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಆದರೆ, ಅನಗತ್ಯ ಮಾತು ಅನಗತ್ಯವಷ್ಟೆ' ಎಂದು ಹೇಳಿದ್ದಾರೆ.

ADVERTISEMENT

'ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ' ಎಂದರು.

'ಕೋವಿಡ್‌ ಕಾಲದಲ್ಲಿ ಜೆಡಿಎಸ್‌ ರಾಜಕೀಯ ಮಾಡಲಿಲ್ಲ. ಆದರೆ, ಜನರ ಪರ ನಿಲ್ಲುವುದನ್ನು ಮರೆಯಲಿಲ್ಲ, ಸರ್ಕಾರವನ್ನು ಎಚ್ಚರಿಸದೇ ಇರಲಿಲ್ಲ. ಕರ್ನಾಟಕ, ಕನ್ನಡಿಗರಿಗೆ ಅಪಮಾನವಾದಾಗ ಸಿಡಿಯಲು ಒಂದು ಕ್ಷಣವೂ ತಡ ಮಾಡಿಲ್ಲ. ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.