ಬೆಂಗಳೂರು: ವಿಧಾನಪರಿಷತ್ ಒಳಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನಿಂದಿಸಿದ್ದ ಸಿ.ಟಿ. ರವಿ ಪ್ರಕರಣದಲ್ಲಿ ಸಭಾಪತಿ ನಡೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಲಾಪ ಮುಂದೂಡಿದಾಗ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ರವಿ ಅವರು ಅಹಿತಕರ ಮಾತು ಹೇಳಿದ್ದಾರೆ. ಆದರೆ, ಘಟನೆ ನಡೆದಿರುವುದು ಪರಿಷತ್ತಿನ ಸಭಾಂಗಣದೊಳಗೆ ಎನ್ನುವುದನ್ನು ಸಭಾಪತಿ ಬಸವರಾಜ ಹೊರಟ್ಟಿ ಮರೆಯಬಾರದು. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರವಿತ್ತು. ಕಲಾಪದ ವ್ಯಾಪ್ತಿಗೆ ಬರುವುದಿಲ್ಲವೆಂದು ನುಣಚಿಕೊಳ್ಳುವುದು ಸರಿಯಲ್ಲ ಎಂದರು.
ಈ ಘಟನೆ ನಡೆದಾಗ ಇದ್ದ ಎಲ್ಲರನ್ನೂ ಕರೆಸಿ ಸಾಕ್ಷ್ಯ ಸಂಗ್ರಹಿಸಬೇಕು, ಲಭ್ಯವಿರುವ ವಿಡಿಯೊಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಸರ್ಕಾರದ ನೆರವು ಪಡೆಯಬೇಕು. ನಾಲ್ಕು ದಶಕ ವಿಧಾನಪರಿಷತ್‌ನಲ್ಲೇ ಕೆಲಸ ಮಾಡಿರುವ ಅವರಿಗೆ ನಿಷ್ಪಕ್ಷಪಾತವಾಗಿ ನಿಭಾಯಿಸುವ ಎಲ್ಲ ಸಾಮರ್ಥ್ಯವೂ ಇತ್ತು. ಈಗಲಾದರೂ, ಪ್ರಕರಣವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ, ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಬೇಕು. ಹಕ್ಕು ಬಾಧ್ಯತಾ ಸಮಿತಿಗೆ ನೀಡಬೇಕು ಅಥವಾ ಉಪ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.