ADVERTISEMENT

ಕರ್ತವ್ಯಲೋಪ: ಅಬಕಾರಿ ಅಧಿಕಾರಿಗಳಿಗೆ ‘ಲೋಕಾ’ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 23:30 IST
Last Updated 29 ಮಾರ್ಚ್ 2025, 23:30 IST
ಬಿ.ಎಸ್‌.ಪಾಟೀಲ
ಬಿ.ಎಸ್‌.ಪಾಟೀಲ   

ಬೆಂಗಳೂರು: ಅಬಕಾರಿ ಇಲಾಖೆಯ ಬೆಂಗಳೂರಿನ 8 ಉಪ ಜಿಲ್ಲಾ ಕಚೇರಿಗಳಲ್ಲಿನ ಕರ್ತವ್ಯಲೋಪದ ಬಗ್ಗೆ 150ಕ್ಕೂ ಹೆಚ್ಚು ಸಿಬ್ಬಂದಿಯನ್ನು ಶನಿವಾರ ವಿಚಾರಣೆ ನಡೆಸಿದ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮದ್ಯ ಮಾರಾಟ ಪರವಾನಗಿ ನೀಡುವಲ್ಲಿ ಲಂಚ ಮತ್ತು ವಿಳಂಬ ಸಂಬಂಧ ಬಂದಿದ್ದ ದೂರುಗಳ ಆಧಾರದಲ್ಲಿ ಲೋಕಾಯುಕ್ತರು, ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್‌.ಫಣೀಂದ್ರ, ಬಿ.ವೀರಪ್ಪ ಮತ್ತು ಲೋಕಾಯುಕ್ತ ಪೊಲೀಸರು 2024ರ ಸೆಪ್ಟೆಂಬರ್‌ 24ರಂದು ಅಬಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.

ಕರ್ತವ್ಯದ ಅವಧಿಯಲ್ಲಿ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿಯಲ್ಲಿ ಇಲ್ಲದಿರುವುದು, ನಗದು ವಹಿಯಲ್ಲಿ ದಾಖಲಿಸದೆ ಹಣ ಇರಿಸಿಕೊಂಡಿದ್ದು, ದಾಖಲೆಗಳಲ್ಲಿ ನಮೂದಾಗದ ಮದ್ಯ ಮತ್ತು ಮಾದಕ ವಸ್ತುಗಳು, ಕಚೇರಿಯಲ್ಲಿಯೇ ಸಿಬ್ಬಂದಿ ಮದ್ಯ ಸೇವಿಸಿದ್ದು ಸೇರಿ ಹಲವು ನ್ಯೂನತೆಗಳು ಪತ್ತೆಯಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತರು, ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ADVERTISEMENT

ಇದೇ 24ರಂದು ಅಬಕಾರಿ ಅಧಿಕಾರಿಗಳು ಲೋಕಾಯುಕ್ತ ಕಚೇರಿಗೆ ಬಂದು ವಿವರಣೆ ನೀಡಿದ್ದರು. ಶನಿವಾರ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ, ಅಬಕಾರಿ ಅಧಿಕಾರಿಗಳು ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸುವಂತೆ ಲೋಕಾಯುಕ್ತ ಪರಿಶೀಲನಾಧಿಕಾರಿಗಳಿಗೆ ಸೂಚಿಸಿದರು. 

ಜತೆಗೆ ಕರ್ತವ್ಯದ ಸಮಯದಲ್ಲಿ ಮತ್ತು ಕಚೇರಿಯಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಿದರು. ಅವುಗಳನ್ನು ಪಾಲಿಸುವಲ್ಲಿ ವಿಫಲವಾದರೆ ಮೇಲಧಿಕಾರಿಗಳು ದಂಡನಾಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಲೋಕಾಯುಕ್ತ ವಿಚಾರಣೆಗೆ ಅಬಕಾರಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಾಗಿದ್ದರು

‘ಗಾಂಜಾ ಪ್ರಕರಣ ಪೊಲೀಸರಿಗೆ’

‘ಸೆಪ್ಟೆಂಬರ್‌ನಲ್ಲಿ ನಡೆಸಿದ್ದ ದಾಳಿಯ ವೇಳೆ ಹಲವು ಕಚೇರಿಗಳಲ್ಲಿ ದಾಖಲೆಗಳಲ್ಲಿ ನಮೂದಾಗದ ಗಾಂಜಾ ಪತ್ತೆಯಾಗಿತ್ತು. ಇದು ಅಪರಾಧ ಪ್ರಕರಣವಾದ ಕಾರಣ ಅವುಗಳ ಬಗ್ಗೆ ತನಿಖೆ ನಡೆಸುವಂತ ಪೊಲೀಸ್‌ ಆಯುಕ್ತರಿಗೆ ತಿಳಿಸಿದ್ದೇವೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದ ಗಾಂಜಾ ಅಕ್ರಮ ಮದ್ಯ ಕುರಿತ ವಿವರಗಳನ್ನು ಕಚೇರಿಯ ದಾಖಲೆಗಳಲ್ಲಿ ಕಡ್ಡಾಯವಾಗಿ ನಮೂದು ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು. ‘ದಾಳಿಯ ವೇಳೆ ಕಂಡು ಬಂದಿದ್ದ ಕರ್ತವ್ಯ ಲೋಪಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅವುಗಳಲ್ಲಿ ಶೇ 60–65ರಷ್ಟು ನ್ಯೂನತೆಗಳನ್ನು ಅವರು ಸರಿಪಡಿಸಿಕೊಂಡಿದ್ದಾರೆ. ಉಳಿದವುಗಳನ್ನು ಶೀಘ್ರವೇ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಅದರಲ್ಲಿ ವಿಳಂಬ ಮಾಡಬಾರದು ಮತ್ತು ಕ್ರಮ ತೆಗದುಕೊಂಡ ನಂತರ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಮಾರ್ಗಸೂಚಿಗಳು

  • ಕರ್ತವ್ಯದ ಸಮಯದಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಸಮವಸ್ತ್ರದಲ್ಲಿರಬೇಕು

  • ಅನ್ಯಕಾರ್ಯ ನಿಮಿತ್ತ ಹೊರಹೋಗುವಾಗ ಚಲನವಲನ ವಹಿಯಲ್ಲಿ ನಮೂದಿಸಬೇಕು

  • ಇಲಾಖಾ ವಾಹನಗಳ ಚಲನವಲನವನ್ನು ಸಂಬಂಧಿತ ವಹಿಯಲ್ಲಿ ಕಡ್ಡಾಯವಾಗಿ ದಾಖಲಿಸಬೇಕು

  • ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು

  • ಪರವಾನಗಿ ನೀಡಿಕೆ ಮತ್ತು ನವೀಕರಣ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪಾರದರ್ಶಕವಾಗಿ ನಡೆಸಬೇಕು

  • ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಮಾರಾಟಕ್ಕೆ ತಡೆಹಾಕಬೇಕು

  • ವಶಕ್ಕೆ ಪಡೆದ ಮದ್ಯ ಮಾದಕ ವಸ್ತು ಮತ್ತು ವಾಹನಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.