ADVERTISEMENT

ವಸತಿ ಖಾತೆ ಕೇಳಿದ್ದೆ, ಈಗ ಸಿಕ್ಕಿದ್ದು ನಿಭಾಯಿಸುವೆ: ಎಂಟಿಬಿ ನಾಗರಾಜ

ಪಕ್ಷದ ಯಾವುದೇ ತೀರ್ಮಾನಕ್ಕೆ ಬದ್ಧ: ಸಚಿವ ಎಂ.ಟಿ.ಬಿ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:36 IST
Last Updated 25 ಜನವರಿ 2021, 19:36 IST
ಎಂ.ಟಿ.ಬಿ. ನಾಗರಾಜ್
ಎಂ.ಟಿ.ಬಿ. ನಾಗರಾಜ್   

ಬೆಂಗಳೂರು: ‘ವಸತಿ ಖಾತೆ ನೀಡುವಂತೆ ಮುಖ್ಯಮಂತ್ರಿ ಬಳಿ ಕೇಳಿದ್ದು ನಿಜ. ಆದರೆ, ಆ ಖಾತೆ ಸಿಗಲಿಲ್ಲ. ಆದರೆ, ಈಗ ಕೊಟ್ಟಿರುವ ಖಾತೆಗಳನ್ನು ಸಮ ರ್ಥವಾಗಿ ನಿಭಾಯಿ ಸುತ್ತೇನೆ’ ಎಂದು ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂ.ಟಿ.ಬಿ ನಾಗರಾಜ್‌ ಹೇಳಿದರು.

ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿಯಲ್ಲಿ ಸೋಮವಾರ ಪೂಜೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಆ ಮೂಲಕ, ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆ ಹೆಸರು ತರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ’ ಎಂದರು.

ಆರಂಭದಲ್ಲಿ ಅಬಕಾರಿ ಖಾತೆ ಕೊಟ್ಟಿದ್ದಕ್ಕೆ ಬೇಸರಗೊಂಡಿದ್ದ ನಾಗರಾಜ್, ಪೌರಾಡಳಿತ ಖಾತೆ ಸಿಕ್ಕಿದ ಬಳಿಕ ಅಧಿಕೃತ ಕಚೇರಿ ಪ್ರವೇಶಿಸಿದರು.

ADVERTISEMENT

ಪಕ್ಷದ ತೀರ್ಮಾನಕ್ಕೆ ಬದ್ಧ: ‘ಪಕ್ಷ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ನಾವೆಲ್ಲರೂ ಬದ್ಧ ರಾಗಿರುತ್ತೇವೆ. ನಾನು ಹೊಸಕೋಟೆ ಕ್ಷೇತ್ರದವನು. ಜಿಲ್ಲಾ ಉಸ್ತುವಾರಿ ಕೊಡಿ ಎಂದು ಬೇಡಿಕೆ ಇಟ್ಟಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ’ ಎಂದರು.

‘ಮಿತ್ರ ಮಂಡಳಿ’ಯಲ್ಲಿ (ಬಿಜೆಪಿಗೆಸೇರಿದ ಶಾಸಕರ ಗುಂಪು) ಬಿರುಕು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಮಿತ್ರ ಮಂಡಳಿಯಲ್ಲಿ ಯಾವುದೇ ಬಿರುಕು ಇಲ್ಲ. ಯಾವುದೇ ಅಸಮಾಧಾನವೂ ಇಲ್ಲ. ನಾವೆಲ್ಲರೂ ಸಮಾಧಾನ ವಾಗಿಯೇ ಇದ್ದೇವೆ’ ಎಂದರು.

ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನದ ಬಗ್ಗೆ ಅವರು, ‘ವಿಶ್ವನಾಥ್ ಅವರಿಗೆ ಸ್ವಲ್ಪ ಬೇಸರ ಆಗಿದೆ. ಇಂಥ ಸಂದರ್ಭದಲ್ಲಿ ಬೇಸರ ಆಗುವುದು ಸಹಜ. ಆದರೆ, ಮುಂದಿನ ದಿನಗಳಲ್ಲಿ ಅದೆಲ್ಲವೂ ಸರಿಯಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲವನ್ನೂ ಸರಿಪಡಿಸುತ್ತಾರೆಂಬ ವಿಶ್ಚಾಸ ಇದೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.