ADVERTISEMENT

ನಕಲಿ ‘ಜಾತಿ’ ಪತ್ರ : 85 ನೌಕರರು ವಜಾ

957 ಮಂದಿ ವಿರುದ್ಧ ಪ್ರಕರಣ; 13ರಲ್ಲಿ ಮಾತ್ರ ಶಿಕ್ಷೆ !

ರಾಜೇಶ್ ರೈ ಚಟ್ಲ
Published 16 ಜನವರಿ 2020, 19:39 IST
Last Updated 16 ಜನವರಿ 2020, 19:39 IST
ಕೆ. ರಾಮಚಂದ್ರ ರಾವ್
ಕೆ. ರಾಮಚಂದ್ರ ರಾವ್   

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರದ ನಾನಾ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 85 ನೌಕರರು ಈವರೆಗೆ ವಜಾಗೊಂಡಿದ್ದಾರೆ.

ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿ ಎಲ್ಲ 30 ಜಿಲ್ಲೆಗಳಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ನಿತ್ಯ ಹಲವು ದೂರುಗಳು ಬರುತ್ತಿವೆ. ಈಗಾಗಲೇ 957 ಮಂದಿಯ ವಿರುದ್ಧ ಡಿಸಿಆರ್‌ಇ ಮೊಕದ್ದಮೆ ದಾಖಲಿಸಿಕೊಂಡಿದೆ. ಸಾಕ್ಷ್ಯ
ಗಳ ಸಮೇತ ಖಚಿತಪಡಿಸಿರುವ ಇನ್ನೂ 545 ಪ್ರಕರಣಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿಗೆ (ಡಿಎಲ್‌ಸಿವಿಸಿ) ಡಿಸಿಆರ್‌ಇ ಸೂಚಿಸಿದೆ.

ತಪ್ಪಿತಸ್ಥರನ್ನು ಕರೆಸಿ ವಿಚಾರಣೆ ನಡೆಸಿದ ಬಳಿಕ, ನಕಲಿ ಜಾತಿ ಪ್ರಮಾಣಪತ್ರ ರದ್ದುಪಡಿಸುವಂತೆ ಸಂಬಂಧಿ
ಸಿದ ತಹಶೀಲ್ದಾರ್‌ಗಳಿಗೆ ಡಿಎಲ್‌ಸಿವಿಸಿ ನಿರ್ದೇಶನ ನೀಡುತ್ತದೆ. ಆದರೆ, ಬೀದರ್‌, ಕಲಬುರ್ಗಿ, ಕೋಲಾರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅಲ್ಲದೆ, ಬಹುತೇಕ ಮಂದಿ ನ್ಯಾಯಾಲಯದ ತಡೆಯಾಜ್ಞೆ ಹಾಗೂ ನೇಮಕಾತಿ ಪ್ರಾಧಿಕಾರಗಳ ಕೃಪೆಯಿಂದ 'ಸುರಕ್ಷಿತ'ವಾಗಿದ್ದಾರೆ.

ADVERTISEMENT

ಖೊಟ್ಟಿ ಜಾತಿ ಪ್ರಮಾಣಪತ್ರ ಸಲ್ಲಿಸಿದ 129 ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಡಿಸಿಆರ್‌ಇ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಅದೇ ವೇಳೆ, ವಿವಿಧ ಕಾರಣಗಳಿಗೆ 171 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಈ ಅಪರಾಧಕ್ಕೆ ಈವರೆಗೆ ಶಿಕ್ಷೆಯಾಗಿರುವುದು 13 ಪ್ರಕರಣಗಳಲ್ಲಿ ಮಾತ್ರ.

ಎರಡು ವರ್ಷಗಳ ಹಿಂದೆ (2018ರ ಜ. 1) ಡಿಸಿಆರ್‌ಇಗೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರಾಗಿ (ಎಡಿಜಿಪಿ) ನೇಮಕಗೊಂಡಿರುವ ಕೆ. ರಾಮಚಂದ್ರ ರಾವ್‌, ಇಂಥ ಪ್ರಕರಣಗಳ ತ್ವರಿತ ವಿಲೇವಾರಿಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅವರು ನೇಮಕಗೊಂಡ ನಂತರ 172 ದೂರುಗಳು ಬಂದಿವೆ. ಎಲ್ಲ ದೂರುಗಳ ವಿಚಾರಣೆ ನಡೆಸಿರುವ ಅವರು, ತಪ್ಪಿತಸ್ಥ ಉದ್ಯೋಗಿಗಳು ಮತ್ತು ಸುಳ್ಳು ಪ್ರಮಾಣಪತ್ರ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ.

ವಿಲೇವಾರಿಗೆ ಬಾಕಿ ವಲಯವಾರು ಪ್ರಕರಣ

ವಲಯ; ಪ್ರಕರಣಗಳು

ಬೆಂಗಳೂರು ನಗರ; 23

ಬೆಂಗಳೂರು ಪ್ರಾದೇಶಿಕ; 84

ಮೈಸೂರು; 51

ದಾವಣಗೆರೆ; 39

ಮಂಗಳೂರು; 102

ಬೆಳಗಾವಿ; 19

ಕಲಬುರ್ಗಿ; 227

ಒಟ್ಟು; 545

***

ನಮ್ಮ ವಿಚಾರಣಾ ವರದಿ ಜಿಲ್ಲಾಮಟ್ಟದಲ್ಲಿ ತ್ವರಿತ ವಿಲೇವಾರಿಯಾದರೆ ತಪ್ಪಿತಸ್ಥರ ಮೇಲೆ ಶೀಘ್ರ ಕ್ರಮ ಸಾಧ್ಯ

-ಕೆ. ರಾಮಚಂದ್ರ ರಾವ್‌ ಎಡಿಜಿಪಿ, ಡಿಸಿಆರ್‌ಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.