ADVERTISEMENT

ಆರ್ಥಿಕ, ಸಾಂಖ್ಯಿಕ ನಿರ್ದೇಶನಾಲಯ: ‘ನಕಲಿ ಪದವಿ’ ಪತ್ತೆಗೆ ನಿವೃತ್ತ ಜಡ್ಜ್‌

2000ದಿಂದ ನೇಮಕ, ಬಡ್ತಿ ಪಡೆದವರ ವಿದ್ಯಾರ್ಹತೆ ಪರಿಶೀಲನೆ

ರಾಜೇಶ್ ರೈ ಚಟ್ಲ
Published 7 ಜುಲೈ 2022, 3:19 IST
Last Updated 7 ಜುಲೈ 2022, 3:19 IST
ರಾಜ್ಯ ಸರ್ಕಾರ
ರಾಜ್ಯ ಸರ್ಕಾರ   

ಬೆಂಗಳೂರು: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ನೇಮಕಗೊಂಡ ಮತ್ತು ಮುಂಬಡ್ತಿ ಪಡೆದ ಅಧಿಕಾರಿ, ನೌಕರರ ವಿರುದ್ಧ ಚಾಟಿ ಬೀಸಲು ಮುಂದಾಗಿರುವ ರಾಜ್ಯ ಸರ್ಕಾರ, ಈ ಬಗ್ಗೆ ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಟಿ.ಎಚ್‌. ನಾರಾಯಣಗೌಡ ಅವರನ್ನು ನೇಮಿಸಿದೆ.

ನಿರ್ದೇಶನಾಲಯದ ನಿವೃತ್ತ ನಿರ್ದೇಶಕಿ ಸಿ.ಎಚ್‌. ವಸುಂಧರಾದೇವಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದಾಖಲಾಗಿರುವ ಪ್ರಕರಣದ ಆಂತರಿಕ ವಿಚಾರಣೆ ಮತ್ತು ಇದೇ ನಿರ್ದೇಶನಾಲಯದಲ್ಲಿ 2000ದ ಏಪ್ರಿಲ್‌ 1ರಿಂದ ಈವರೆಗೆ ನೇಮಕಗೊಂಡ ಮತ್ತು ಮುಂಬಡ್ತಿ ಪಡೆದ ಅಧಿಕಾರಿ, ನೌಕರರ ಪದವಿ ಪ್ರಮಾಣಪತ್ರಗಳನ್ನು ಪರಿಶೀಲಿಸಿ ಎರಡು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ನಾರಾಯಣಗೌಡ ಅವರಿಗೆ ಸೂಚಿಸಲಾಗಿದೆ. ವಸುಂಧರಾದೇವಿ ಅವರ ವಿಚಾರಣೆ ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿರುವುದರಿಂದ ಸ್ಪಷ್ಟ ನಿರ್ಣಯಗಳನ್ನೊಳಗೊಂಡ ವರದಿ ನೀಡಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಮುಂಬಡ್ತಿ ನೀಡುವ ವೇಳೆ ಪದವಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮಂಡ್ಯದ ಕೆ.ಆರ್‌. ರವೀಂದ್ರ ಎಂಬುವವರು ವಸುಂಧರಾದೇವಿ ವಿರುದ್ಧ ಎಸಿಬಿಗೆ ದೂರು ನೀಡಿದ್ದರು. ದೂರಿನಲ್ಲಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆಯ ವಿಜೆಲೆನ್ಸ್‌ ಅಧಿಕಾರಿಗಳಿಂದ ವಸುಂಧರಾದೇವಿ ಅವರನ್ನು ವಿಚಾರಣೆಗೆ ಒಳಪಡಿಸಿ, ಆರೋಪಗಳು ದೃಢಪಟ್ಟರೆ ಪ್ರಕರಣ ದಾಖಲಿಸಲು ಸರ್ಕಾರಿ ಆದೇಶ ಸಹಿತ ಎಸಿಬಿಗೆ ಕಳುಹಿಸುವಂತೆ ಎಸಿಬಿ ಪೊಲೀಸ್‌ ಮಹಾನಿರ್ದೇಶಕರು ಇಲಾಖೆಗೆ ಸೂಚಿಸಿದ್ದರು.

ADVERTISEMENT

ಎಸಿಬಿಗೆ ಸಲ್ಲಿಕೆಯಾದ ದೂರಿನ ಕುರಿತು ಸಮಜಾಯಿಷಿ ನೀಡುವಂತೆ ವಸುಂಧರಾದೇವಿ ಅವರಿಗೆ 2021 ಸೆ. 13ರಂದು ಸರ್ಕಾರ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ಅ. 25ರಂದು ಉತ್ತರಿಸಿದ್ದ ಅವರು, ತಮ್ಮ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದಿದ್ದರು. ಬಳಿಕ ಅವರು ನಿವೃತ್ತರಾಗಿದ್ದರು.

‘ವಸುಂಧರಾದೇವಿ ಅವರ ಸಮಜಾಯಿಷಿಗೆ ಅದೇ ಹಂತದ ಅಧಿಕಾರಿಯಾಗಿರುವ ನಾನು ಅಭಿಪ್ರಾಯ ನೀಡುವುದು ಸೂಕ್ತವಲ್ಲ. ದೂರು ಪರಿಶೀಲಿಸಿ ತೀರ್ಮಾನ ಕೊಡುವುದು ನಿರ್ದೇಶಕರ ಹೊಣೆ. ಸರ್ಕಾರ ತನಿಖೆ ನಡೆಸಿದರೆ ಇಲಾಖಾ ಕಡತವನ್ನು ಒಪ್ಪಿಸಲಾಗುವುದು’ ಎಂದು ಹಾಲಿ ನಿರ್ದೇಶಕ ಎನ್‌. ಮಾಧುರಾಮ್‌ ಅವರು ಇದೇ ಮಾರ್ಚ್ 14ರಂದು ಪತ್ರ ಬರೆದಿದ್ದರು.

‘ಆರೋಪಿ ಅಧಿಕಾರಿ, ಹಾಲಿನಿರ್ದೇಶಕರ ಅಭಿಪ್ರಾಯ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಆರೋಪ ಸರಿ ಎನಿಸುತ್ತಿದೆ. ಹೀಗಾಗಿ, ಆ ಪ್ರಕರಣ ಮತ್ತು ನಿರ್ದೇಶನಾಲಯದಲ್ಲಿ 2000 ಏ. 1 ನಂತರ ನೇಮಕ, ಬಡ್ತಿ ಪಡೆದ ಅಧಿಕಾರಿ, ನೌಕರರ ಪದವಿ
ಪ್ರಮಾಣಪತ್ರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಅಸ್ತಿತ್ವದಲ್ಲಿಲ್ಲದ ವಿವಿಗಳಿಂದ ಪದವಿ
ಇಲಾಖೆಯಲ್ಲಿ 70ಕ್ಕೂ ಹೆಚ್ಚು ಮಂದಿ ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿ ನೇಮಕ, ಬಡ್ತಿ ಪಡೆದಿರುವ ಅನುಮಾನವಿದೆ. ವಿವಿಧ ವೃಂದಗಳಲ್ಲಿ ಮುಂಬಡ್ತಿ ನೀಡಲು ನಡೆದ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆಯಲ್ಲಿ ನೌಕರರ ವಿದ್ಯಾರ್ಹತೆ ಪರಿಶೀಲಿಸಿದಾಗ ಸಂದೇಹ ಬಂದಿದೆ. ಅಸ್ತಿತ್ವದಲ್ಲಿಯೇ ಇಲ್ಲದ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಪ್ರಮಾಣಪತ್ರದ ಸಲ್ಲಿಸಿದ ಪ್ರಕರಣಗಳು ಈಗಾಗಲೇ ಪತ್ತೆಯಾಗಿದ್ದು, ಕೆಲವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಕೆಲವರು ಸಿಕ್ಕಿಬೀಳುವ ಭಯದಿಂದ ಬಡ್ತಿಯನ್ನೇ ನಿರಾಕರಿಸಿದ್ದಾರೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದರು.

***

ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದವರನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ. ಅಂಥವರ ಪತ್ತೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ನೇಮಿಸಿರುವುದು ಇದೇ ಮೊದಲು.
- ಮುನಿರತ್ನ, ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.