ಬೆಂಗಳೂರು: ದೆಹಲಿಯಲ್ಲಿ ಕೂತು ಬೆಂಗಳೂರಿನಲ್ಲಿ ನಾಲ್ಕು ಕಂಪನಿಗಳನ್ನು ಸ್ಥಾಪಿಸಿ, ₹ 260 ಕೋಟಿಗೂ ಹೆಚ್ಚು ಮೊತ್ತದ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿದ್ದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಒಬ್ಬರನ್ನು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ) ಬೆಂಗಳೂರು ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.
‘ಆಕಾಶ್ ಕುಮಾರ್ ಎಂಬ ವ್ಯಕ್ತಿಯು ಗುರುಗ್ರಾಮ ನಿವಾಸಿಯಾಗಿದ್ದು, ತನ್ನದೇ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರ ಬಳಸಿಕೊಂಡು ಬೆಂಗಳೂರಿನ ವಿಳಾಸದಲ್ಲಿ ನಾಲ್ಕು ಕಂಪನಿಗಳನ್ನು ನೋಂದಣಿ ಮಾಡಿದ್ದ. ಈ ಕಂಪನಿಗಳು ಯಾವುದೇ ವಹಿವಾಟು ನಡೆಸದೆಯೇ ಇನ್‌ವಾಯ್ಸ್‌ಗಳನ್ನು ಸೃಷ್ಟಿಸುತ್ತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಈ ಸಂಬಂಧ ತನಿಖೆ ಆರಂಭಿಸಲಾಗಿತ್ತು’ ಎಂದು ಮೂಲಗಳು ಮಾಹಿತಿ ನೀಡಿವೆ.
‘ಈ ಎಲ್ಲ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಒಬ್ಬನೇ ವ್ಯಕ್ತಿ ನಿರ್ದೇಶಕನಾಗಿರುವ ಬಗ್ಗೆ ಮಾಹಿತಿ ದೊರೆಯಿತು. ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಈ ಕಂಪನಿಗಳು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ, ಅವೆಲ್ಲವೂ ನಕಲಿ ಇನ್‌ವಾಯ್ಸ್‌ಗಳು ಎಂಬುದು ಗೊತ್ತಾಯಿತು. ಜತೆಗೆ ಕಂಪನಿಗಳು ನೋಂದಣಿಯಾಗಿದ್ದ ವಿಳಾಸದಲ್ಲಿ ಯಾವುದೇ ಕಚೇರಿಗಳು ಇರಲಿಲ್ಲ. ಒಂದು ಕಂಪನಿಯ ವಿಳಾಸದಲ್ಲಂತೂ ನಿವೇಶನ ಮಾತ್ರವಿತ್ತು’ ಎಂದು ವಿವರಿಸಿವೆ.
‘ಮೂರು ವರ್ಷಗಳ ಅವಧಿಯಲ್ಲಿ ಈ ಕಂಪನಿಗಳು ಪರಸ್ಪರರ ಹೆಸರಿನಲ್ಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿದ್ದು, ಒಟ್ಟು ₹ 260 ಕೋಟಿ ಮೊತ್ತದ ಖೊಟ್ಟಿ ವಹಿವಾಟನ್ನು ನಡೆಸಿವೆ. ಈ ಮೂಲಕ ಒಟ್ಟು ₹ 48 ಕೋಟಿ ಮೊತ್ತದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಂಡಿವೆ. ಒಬ್ಬ ವ್ಯಕ್ತಿಯೇ ಈ ಎಲ್ಲ ವಹಿವಾಟನ್ನೂ ನಡೆಸಿದ್ದಾನೆ’ ಎಂದಿವೆ.
‘ದಾಖಲೆಗಳನ್ನು ಕಲೆ ಹಾಕಿ ವಿಶ್ಲೇಷಿಸಿದ ನಂತರ, ದೆಹಲಿಯಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ಶುಕ್ರವಾರ ಬೆಳಿಗ್ಗೆಯೇ ದೆಹಲಿಯ ಆರು ಕಡೆ ದಾಳಿ ನಡೆಸಲಾಯಿತು. ಆರೋಪಿಯ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಹಲವು ಸೀಲ್‌ಗಳು, ಪ್ರತಿ ಕಂಪನಿಯ ಲೆಕ್ಕಪತ್ರ ನಿರ್ವಹಣೆಗೆ ಬಳಸುತ್ತಿದ್ದ ನಾಲ್ಕು ಪ್ರತ್ಯೇಕ ಕಂಪ್ಯೂಟರ್‌ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ನಾಲ್ಕು, ದೆಹಲಿಯಲ್ಲಿ ಎರಡು ಕಂಪನಿಗಳನ್ನು ನಡೆಸುತ್ತಿದ್ದ ಬಗ್ಗೆ ಪುರಾವೆಗಳು ದೊರೆತಿವೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.