ADVERTISEMENT

ವೈದ್ಯರ ನಿದ್ದೆಗೆಡಿಸಿದ ‘ಕಿಡ್ನಿ ಮಾರಾಟ’ ಜಾಲ

ನಕಲಿ ಸಂದೇಶ ಹರಿಬಿಟ್ಟು ಲಕ್ಷಾಂತರ ರೂಪಾಯಿ ವಂಚನೆ * ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡುತ್ತಿರುವ ವೈದ್ಯರು

ಸಂತೋಷ ಜಿಗಳಿಕೊಪ್ಪ
Published 20 ಅಕ್ಟೋಬರ್ 2018, 19:31 IST
Last Updated 20 ಅಕ್ಟೋಬರ್ 2018, 19:31 IST
   

ಬೆಂಗಳೂರು: ‘ಕಿಡ್ನಿ ಮಾರಾಟಕ್ಕಿದೆ’ ಎಂದುಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರ ಹೆಸರಿನಲ್ಲಿನಕಲಿ ಸಂದೇಶಗಳನ್ನು ಹರಿಬಿಟ್ಟು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೋಚುತ್ತಿರುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ.

ಇಲ್ಲಿಯ ಕೊಲಂಬಿಯಾ ಏಷಿಯಾ, ಫೋರ್ಟಿಸ್‌ ಸೇರಿದಂತೆ ರಾಜ್ಯದ 18 ಆಸ್ಪತ್ರೆಗಳ ಕಿಡ್ನಿ ಕಸಿ ಸಂಯೋಜನೆ ವೈದ್ಯರ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನಸೈಬರ್‌ ಕ್ರೈಂ ಠಾಣೆಯಲ್ಲಿ 32 ಪ್ರಕರಣಗಳು ದಾಖಲಾಗಿವೆ.

ಕಿಡ್ನಿ ಕಸಿ ವಿಭಾಗದ ತಜ್ಞ ವೈದ್ಯರ ಹೆಸರುಗಳನ್ನು ಬಳಸಿಕೊಂಡು ವಂಚಕರು, ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ಕಿಡ್ನಿ ಸಿಗಬಹುದೆಂಬ ಆಸೆಯಿಂದ ಸಾರ್ವಜನಿಕರು ಹಣ ಕೊಟ್ಟು ಮೋಸ ಹೋಗುತ್ತಿದ್ದಾರೆ.

ADVERTISEMENT

‘ವೈದ್ಯರ ಹೆಸರು ನೋಡಿ ಹಣ ಕೊಟ್ಟಿದ್ದೇವೆ. ಅವರೇ ನಮಗೆ ಮೋಸ ಮಾಡಿದ್ದಾರೆ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ‘ಯಾರೋ ಮಾಡುತ್ತಿರುವ ತಪ್ಪು ನಮ್ಮ ಮೇಲೆ ಬರುತ್ತಿದೆ’ ಎಂದು ಆತಂಕಗೊಂಡಿರುವ ವೈದ್ಯರೂ ಪೊಲೀಸರ ಮೊರೆ ಹೋಗುತ್ತಿದ್ದಾರೆ.

‘ಕೊಲಂಬಿಯಾ ಏಷಿಯಾದ ವೈದ್ಯ ಅರುಣ್ ಡಬ್ಲ್ಯುಎಸ್‌ ಡೇವಿಡ್‌, ಸೆಪ್ಟೆಂಬರ್ 27ರಂದೇ ದೂರು ಕೊಟ್ಟಿದ್ದರು. ಅದಾದ ನಂತರ, ಹಲವು ವೈದ್ಯರು ದೂರು ಕೊಟ್ಟಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ನಕಲಿ ಸಂದೇಶ ಸೃಷ್ಟಿಸುತ್ತಿರುವ ವಂಚಕರು ಯಾರೂ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

ಜಾಲದ ಕಾರ್ಯವೈಖರಿ: ‘ಆಸ್ಪತ್ರೆಗಳ ಜಾಲತಾಣಗಳಲ್ಲಿ ಫೋಟೊ ಸಮೇತ ವೈದ್ಯರ ಮಾಹಿತಿ ಪ್ರಕಟಿಸಲಾಗಿದೆ. ಅಲ್ಲಿಂದ ಕದ್ದ ಈ ಮಾಹಿತಿಯನ್ನು ವಂಚಕರು, ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

‘ಕಿಡ್ನಿ ಅಗತ್ಯವಿರುವ ಸಾರ್ವಜನಿಕರು, ಸಂದೇಶದಲ್ಲಿರುವ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸುತ್ತಾರೆ. ಕಿಡ್ನಿ ಮಾರಾಟಕ್ಕೂ ಮುನ್ನ ಕೆಲವು ಶುಲ್ಕಗಳನ್ನು ಭರಿಸಬೇಕೆಂದು ಹೇಳಿ ವಂಚಕರು, ತಮ್ಮ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ಹಾಕಿಸಿಕೊಳ್ಳುತ್ತಾರೆ. ಬಳಿಕ, ಮೊಬೈಲ್ ಸ್ವಿಚ್ಡ್ ಆಫ್‌ ಮಾಡುತ್ತಾರೆ. ವಂಚನೆಗೀಡಾದವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದು ವಿವರಿಸಿದರು.

ಬೆಳಕಿಗೆ ಬಂದಿದ್ದು: ‘ಸೆಪ್ಟೆಂಬರ್ 10ರಂದು ಕೊಲಂಬಿಯಾ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ, ‘ನನಗೆ ಕಿಡ್ನಿ ಬೇಕಿದೆ. ಕೊಡಿ’ ಎಂದು ವೈದ್ಯ ಅರುಣ್ ಡೇವಿಡ್‌ ಅವರ ದುಂಬಾಲು ಬಿದ್ದಿದ್ದ. ‘ನಾನು ಏಕೆ ಕಿಡ್ನಿ ಕೊಡಬೇಕು. ಕಾನೂನು ಪ್ರಕಾರ ರಕ್ತ ಸಂಬಂಧಿಗಳಿಂದ ಮಾತ್ರ ಕಿಡ್ನಿ ಪಡೆದು ಕಸಿ ಮಾಡುತ್ತೇವೆ’ ಎಂದು ಅರುಣ್ ಹೇಳಿದ್ದರು. ಆ ವ್ಯಕ್ತಿ, ‘ಕಿಡ್ನಿ ಮಾರಾಟಕ್ಕಿದೆ. ಸಂಪರ್ಕಿಸಿ ಎಂದು ನೀವೇ ನನ್ನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದೀರಾ?’ ನೋಡಿ ಎಂದು, ತನಗೆ ಬಂದಿದ್ದ ಸಂದೇಶವನ್ನು ತೋರಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಸಂದೇಶದಲ್ಲಿ ವೈದ್ಯರ ಹೆಸರು ಮಾತ್ರ ಇತ್ತು. ಮೊಬೈಲ್ ಸಂಖ್ಯೆ ಬೇರೆಯದ್ದಾಗಿತ್ತು. ನಕಲಿ ವಿಳಾಸ ನೀಡಿ ಖರೀದಿಸಿದ ಸಿಮ್ ಕಾರ್ಡ್‌ ಅದಾಗಿತ್ತು. ಆರೋಪಿಗಳು, ಯಾರದ್ದೊ ಗುರುತಿನ ಚೀಟಿಗಳನ್ನು ಬಳಸಿಕೊಂಡು ಸಿಮ್‌ ಕಾರ್ಡ್‌ ಖರೀದಿಸಿ ಕೃತ್ಯಕ್ಕೆ ಬಳಸುತ್ತಿದ್ದಾರೆ’ ಎಂದರು.

ಜಾಗೃತಿ ಮೂಡಿಸಲು ಕ್ರಮ:‘ವೈದ್ಯರ ಹೆಸರಿನಲ್ಲಿ ಹರಿದಾಡುತ್ತಿರುವ ನಕಲಿ ಸಂದೇಶಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದೇವೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಚುನಾಯಿತ ಅಧ್ಯಕ್ಷ ಡಾ. ಮಧುಸೂದನ್ ಕರಿಗನೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರಂಭದಲ್ಲಿ ಯಾರೊ ಒಬ್ಬ ವೈದ್ಯನ ಹೆಸರಿನಲ್ಲಿ ಇಂಥ ಸಂದೇಶಗಳು ಹರಿದಾಡುತ್ತಿದ್ದವು. ಈಗ ಹಲವು ವೈದ್ಯರ ಹೆಸರು ಬಳಸಿಕೊಂಡು ಸಂದೇಶ ಸೃಷ್ಟಿಸಲಾಗುತ್ತಿದೆ. ಇದರಿಂದ ವೈದ್ಯ ವೃತ್ತಿಯಲ್ಲಿರುವವರಿಗೆ ಆತಂಕವಾಗಿದೆ’ ಎಂದರು.

**

ಫೇಸ್‌ಬುಕ್‌ನಲ್ಲಿ ವೈದ್ಯರ ನಕಲಿ ಖಾತೆ

‘ಫೋರ್ಟಿಸ್ ಆಸ್ಪತ್ರೆಯ ವೈದ್ಯ ಝಡ್. ಶಕೀರ್ ತಬ್ರೇಜ್ ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರನ್ನು ವಂಚಿಸಲಾಗಿದೆ. ಆ ಬಗ್ಗೆ ಶಕೀರ್‌ ಅವರೇ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘shakir Tabrez' ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವ ವಂಚಕರು, ‘ಕಿಡ್ನಿಗಳು ಮಾರಾಟಕ್ಕಿವೆ. ಕೊಂಡುಕೊಳ್ಳುವವರಿದ್ದರೆ ಮೊ. 87******80 ಮತ್ತು 81******19 ಸಂಪರ್ಕಿಸಿ’ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಕಳುಹಿಸಿ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದರು.

**

ನಿಮಗೆ ಕಿಡ್ನಿ ಬೇಕೆ?

₹30 ಲಕ್ಷ– ₹1 ಕೋಟಿ ಕೊಟ್ಟರೆ ಕಿಡ್ನಿ ಕೊಡುತ್ತೇನೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ – ಡಾ. ***, ಮೊಬೈಲ್:*******’

**

ಕಿಡ್ನಿ ಕಸಿ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆ ‘ಮಾನವ ಅಂಗಾಂಗ ಕಸಿ ಕಾಯ್ದೆ–1994’ಯಲ್ಲಿ ವಿವರಿಸಲಾಗಿದೆ. ಈಗ ಹರಿದಾಡುತ್ತಿರುವ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು.

-ಡಾ. ರವೀಂದ್ರ, ಮಾಜಿ ಅಧ್ಯಕ್ಷ, ಕರ್ನಾಟಕ ಘಟಕ, ಭಾರತೀಯ ವೈದ್ಯಕೀಯ ಸಂಘ

**

ನಾನು ಕಿಡ್ನಿ ಮಾರುವ ಏಜೆಂಟ್‌ನೆಂದು ಹೇಳಿ ಸುಳ್ಳು ಜಾಹೀರಾತು ನೀಡಿದ್ದಾರೆ. ಇದರಿಂದ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದು, ನನ್ನ ಹಾಗೂ ನನ್ನ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ.

-ಅರುಣ್ ಡೇವಿಡ್, ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.