ADVERTISEMENT

ನಕಲಿ ಔಷಧಿ ತಯಾರಿಕೆ: ಜಾಮೀನು ರಹಿತ ವಾರಂಟ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 16:22 IST
Last Updated 17 ಡಿಸೆಂಬರ್ 2025, 16:22 IST
<div class="paragraphs"><p>ಬೆಳಗಾವಿ ಅಧಿವೇಶನ (ಪ್ರಾತಿನಿಧಿಕ ಚಿತ್ರ)</p></div>

ಬೆಳಗಾವಿ ಅಧಿವೇಶನ (ಪ್ರಾತಿನಿಧಿಕ ಚಿತ್ರ)

   

ಸುವರ್ಣ ವಿಧಾನಸೌಧ (ಬೆಳಗಾವಿ): ನಕಲಿ ಔಷಧಿ ತಯಾರಿಸುವವರು, ಕಲಬೆರಕೆ ಮಾಡುವವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸುವ ಮತ್ತು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ಉದ್ದೇಶದ ‘ಔಷಧ ಮತ್ತು ಪ್ರಸಾದನ ಸಾಮಗ್ರಿ ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿತು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರು ಮಸೂದೆಯನ್ನು ಪರ್ಯಾಲೋಚನೆಗೆ ಮಂಡಿಸಿದರು. ‘ಆದರೆ, ಈ ಮಸೂದೆಯಲ್ಲಿ ಜೀವಾವಧಿ ಶಿಕ್ಷೆಯ ಅಂಶವನ್ನು ಕೈಬಿಡಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

ವಿಷಕಾರಿ, ನಕಲಿ, ಕಳಪೆ ಔಷಧ ತಯಾರಿಸುವುದು ಮತ್ತು ಮಾರುವುದು ನಿಷಿದ್ಧ. ಈ ಹಿಂದೆ ನಕಲಿ ಔಷಧಿ ಜಪ್ತಿ ಮಾಡಿ ಪ್ರಕರಣ ದಾಖಲಾದ ಸಂದರ್ಭದಲ್ಲಿ ಮಾರಾಟಗಾರರು ಔಷಧ ಎಲ್ಲಿಂದ ತರಿಸಿದ್ದರು ಎಂಬುದನ್ನು ಆರೋಗ್ಯ ಇಲಾಖೆಯೇ ನ್ಯಾಯಾಲಯದಲ್ಲಿ ನಿರೂಪಿಸಬೇಕಿತ್ತು. ಆದರೆ, ಇನ್ನು ಮುಂದೆ ಮಾರಾಟ ಮಾಡುವವರೇ ಎಲ್ಲಿಂದ ತಂದಿದ್ದು ಎಂಬುದನ್ನು ನಿರೂಪಿಸಬೇಕಾಗುತ್ತದೆ ಎಂದು ಅವರು ಹೇಳಿದರು.

1940 ರ ಔಷಧ ಮತ್ತು ಪ್ರಸಾದನ ಸಾಮಗ್ರಿ ಕೇಂದ್ರ ಅಧಿನಿಯಮ ಕರ್ನಾಟಕಕ್ಕೆ ಅನ್ವಯವಾಗುವಂತೆ, ಕೇಂದ್ರ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ರಾಜ್ಯದಲ್ಲಿ ಕೇಂದ್ರ ಔಷಧ ಪ್ರಯೋಗಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ದಿನೇಶ್ ತಿಳಿಸಿದರು.

ಅಂಗೀಕಾರಗೊಂಡ ಮಸೂದೆಗಳು:

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮಸೂದೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮಸೂದೆ, ಬಾಂಬೆ ಸಾರ್ವಜನಿಕ ನ್ಯಾಸ(ಟ್ರಸ್ಟ್) ತಿದ್ದುಪಡಿ ಮಸೂದೆ, ನಾಡುಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಮಸೂದೆಗೆ ಅಂಗೀಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.