ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸದ ಬಳಿ ಪತ್ತೆಯಾದ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರು, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರಿನಲ್ಲಿ ಇರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಆ ಕಾರನ್ನು ಕಾಂಗ್ರೆಸ್ ಕಾರ್ಯಕರ್ತ ಕೃಷ್ಣಮೂರ್ತಿ ಅವರು ಬಳಸುತ್ತಿರುವುದೂ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಶಿವಕುಮಾರ್ ಅವರ ನಿವಾಸದ ಸಮೀಪದ 18ನೇ ಕ್ರಾಸ್‌ನಲ್ಲಿ ಸೆ.7ರಂದು ಕೆಎ-51 ಎಂಡಬ್ಲ್ಯು 6814 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಂತಿತ್ತು. ಅದರ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಅರ್ಧ ದಿನ ಕಳೆದರೂ ಕಾರು ಸ್ಥಳದಲ್ಲೇ ನಿಂತಿದ್ದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅಡಚಣೆ ಆಗಬಹುದು ಎಂದು ಸಂಚಾರ ಪೊಲೀಸರು ಅದನ್ನು ತೆರವುಗೊಳಿಸಲು ಮುಂದಾಗಿದ್ದರು.
ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಿದಾಗ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲಸಿರುವ ದೀಪಕ್ ಅವರ ಕಾರು ಎಂಬುದು ಕಂಡುಬಂದಿತ್ತು. ಅವರಿಗೆ ಕರೆ ಮಾಡಿ, ಕಾರು ತೆರವುಗೊಳಿಸುವಂತೆ ಪೊಲೀಸರು ತಿಳಿಸಿದ್ದರು. ಆದರೆ, ದೀಪಕ್ ಅವರು ಕಾರು ತಮ್ಮ ಮನೆ ಮುಂದೆಯೇ ನಿಲ್ಲಿಸಲಾಗಿದೆ ಎಂದಿದ್ದರು.
ಅಚ್ಚರಿಗೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಈ ನಂಬರ್ ಪ್ಲೇಟ್ ಹಿಂದೆ ಮತ್ತೊಂದು ನಂಬರ್ ಪ್ಲೇಟ್ ಇರುವುದು ಪತ್ತೆಯಾಗಿತ್ತು. ಕೆಎ–42 ಪಿ 6606 ಸಂಖ್ಯೆಯ ನಂಬರ್ ಪ್ಲೇಟ್ ಪತ್ತೆಯಾಗಿತ್ತು.
ನಂತರ, ಕಾರನ್ನು ಠಾಣೆಗೆ ತೆಗೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಮಾಗಡಿಯ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರಿನಲ್ಲಿ ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಆಗಿರುವುದು ಕಂಡುಬಂದಿತ್ತು. ಆ ಬಳಿಕ ಮಂಜುನಾಥ್ ಅವರಿಗೆ ನೋಟಿಸ್ ಕೊಟ್ಟು ಮಾಹಿತಿ ಕೇಳಲಾಗಿತ್ತು.
ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೃಷ್ಣಮೂರ್ತಿ ಎಂಬ ಕಾರ್ಯಕರ್ತನಿಗೆ ಈ ಕಾರನ್ನು ಕೊಡಲಾಗಿತ್ತು. ಈಗಲೂ ಅವರೇ ಕಾರು ಬಳಸುತ್ತಿದ್ದಾರೆ ಎಂದು ಉತ್ತರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.