ADVERTISEMENT

ಸುಳ್ಳು ಸಾಕ್ಷ್ಯ: ಕೆಪಿಟಿಸಿಎಲ್‌ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2023, 16:54 IST
Last Updated 3 ಏಪ್ರಿಲ್ 2023, 16:54 IST

ಬೆಂಗಳೂರು: ಲಂಚ ಪ್ರಕರಣವೊಂದರಲ್ಲಿ ಆಪಾದಿತ ಸರ್ಕಾರಿ ನೌಕರನಿಗೆ ಅನುಕೂಲವಾಗುವಂತೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಆರೋಪದ ಮೇಲೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಸಹಾಯಕ ಆಡಳಿತಾಧಿಕಾರಿ ಕೆ. ಪ್ರಶಾಂತ್‌ ಕುಮಾರ್‌ ವಿರುದ್ಧ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಪಾರ್ಟ್‌ಮೆಂಟ್‌ ಮಾಲೀಕರ ಸಂಘವೊಂದರ ನೋಂದಣಿಗೆ ₹ 10,000 ಲಂಚಕ್ಕೆ ಬೇಡಿಕೆ ಇಟ್ಟು, ₹ 7,000 ಪಡೆಯುತ್ತಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್‌.ಪಿ. ಸದಾಶಿವ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 2017ರ ಫೆಬ್ರುವರಿ 10ರಂದು ಬಂಧಿಸಿತ್ತು. ಈ ಪ್ರಕರಣದಲ್ಲಿ ಪ್ರಶಾಂತ್‌ ಕುಮಾರ್‌ ಅವರನ್ನು ಕಾರ್ಯಾಚರಣೆ ವೇಳೆ ನೇರ ಸಾಕ್ಷಿಯನ್ನಾಗಿ ಕರೆದೊಯ್ಯಲಾಗಿತ್ತು. ದೂರುದಾರ ಅನಂತ್‌ ಜತೆಯಲ್ಲೇ ಅವರು ಕಾರ್ಯಾಚರಣೆಯ ಆರಂಭದಿಂದ ಅಂತ್ಯದವರೆಗೂ ಇದ್ದರು.

ಪ್ರಕರಣದ ತನಿಖೆ ನಡೆಸಿದ್ದ ಎಸಿಬಿ ಅಧಿಕಾರಿಗಳು ಸಹಕಾರ ಅಭಿವೃದ್ಧಿ ಅಧಿಕಾರಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು. ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಪ್ರಶಾಂತ್‌ ಕುಮಾರ್‌, ಆರೋಪಪಟ್ಟಿಯಲ್ಲಿ ಸದಾಶಿವ ವಿರುದ್ಧ ಇದ್ದ ಆರೋಪಗಳಿಗೆ ತದ್ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದರು. ‘ಸದಾಶಿವ ಲಂಚದ ಹಣವನ್ನು ವಾಪಸ್‌ ನೀಡುತ್ತಿದ್ದರು’ ಎನ್ನುವ ಮೂಲಕ ಇಡೀ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ‍‍ಪೂರ್ಣಗೊಳಿಸಿ 2022ರ ಜೂನ್‌ 13ರಂದು ತೀರ್ಮಾನ ಪ್ರಕಟಿಸಿದ್ದ ವಿಶೇಷ ನ್ಯಾಯಾಲಯ, ‘ಸದಾಶಿವ ಅಪರಾಧಿ’ ಎಂದು ಸಾರಿತ್ತು. ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿತ್ತು. ಸುಳ್ಳು ಸಾಕ್ಷ್ಯ ಹೇಳಿರುವ ಪ್ರಶಾಂತ್‌ ಕುಮಾರ್‌ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 193ರ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಅದೇ ಆದೇಶದಲ್ಲಿ ನಿರ್ದೇಶನ ನೀಡಿತ್ತು.

ಸುಳ್ಳು ಸಾಕ್ಷ್ಯ ನುಡಿದಿರುವುದಕ್ಕೆ ಕ್ರಿಮಿನಲ್‌ ಪ್ರಕರಣ ದಾಖಲಿಸಿಬೇಕೆಂಬ ನ್ಯಾಯಾಲಯದ ನಿರ್ದೇಶನದ ಕುರಿತು ಪ್ರತ್ಯೇಕ ಅರ್ಜಿಯೊಂದನ್ನು ದಾಖಲಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದೆ. ‘ಪ್ರಕರಣ ನಡೆದು 31 ತಿಂಗಳಾಗಿದ್ದುದು ಮತ್ತು ಪ್ರಾಸಿಕ್ಯೂಷನ್‌ ಪರ ವಕೀಲರ ಸಹಕಾರ ಇಲ್ಲದ ಕಾರಣದಿಂದ ಸರಿಯಾಗಿ ಸಾಕ್ಷ್ಯ ನುಡಿಯಲು ಸಾಧ್ಯವಾಗಿರಲಿಲ್ಲ. ಅದರಲ್ಲಿ ಆರೋಪಿಗೆ ಸಹಕರಿಸುವ ಉದ್ದೇಶ ಇರಲಿಲ್ಲ’ ಎಂದು ಪ್ರಶಾಂತ್‌ ಕುಮಾರ್‌ ವಾದಿಸಿದ್ದರು. ಅದನ್ನು ತಿರಸ್ಕರಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್‌ ಕೆ., ಅಧಿಕಾರಿ ವಿರುದ್ಧ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ನ್ಯಾಯಾಲಯದ ಶಿರಸ್ತೇದಾರ್‌ಗೆ ಮಾರ್ಚ್‌ 29ರಂದು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.