ADVERTISEMENT

'ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡದೇ,ಏರ್‌ಟೆಲ್‌ಗೆ ಜೋಡಣೆ ಮಾಡಿದ್ದ ರೈತರು'

ಬಿ.ಸಿ.ಪಾಟೀಲ ಹೇಳಿಕೆ | ರೈತರ ವಿಮಾ ಪರಿಹಾರ ಹಣ ಏರ್‌ಟೆಲ್‌ ಖಾತೆಗೆ!

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 11:31 IST
Last Updated 4 ಜೂನ್ 2020, 11:31 IST
ಕೃಷಿ ಸಚಿವ ಬಿ.ಸಿ.ಪಾಟೀಲ್
ಕೃಷಿ ಸಚಿವ ಬಿ.ಸಿ.ಪಾಟೀಲ್   

ಬೆಂಗಳೂರು: ರೈತರು ತಮ್ಮ ಬ್ಯಾಂಕಿನ ಖಾತೆಗೆ ಆಧಾರ್‌ ಜೋಡಣೆ ಮಾಡದೇ ಏರ್‌ಟೆಲ್‌ಗೆ ಜೋಡಣೆ ಮಾಡಿರುವುದರಿಂದ ಸರ್ಕಾರ ಬಿಡುಗಡೆ ಮಾಡಿದ ಬೆಳೆ ವಿಮಾ ಪರಿಹಾರದ ಹಣ ರೈತರ ಸ್ವಂತ ಖಾತೆಗೆ ಹೋಗದೆ, ಏರ್‌ಟೆಲ್‌ ಖಾತೆಯಲ್ಲಿ ಜಮೆ ಆಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಆದ್ದರಿಂದ ಎಲ್ಲಾ ರೈತರೂ ಆಧಾರ್‌ ಕಾರ್ಡ್‌ ಅನ್ನು ತಮ್ಮ ಬ್ಯಾಂಕ್‌ನ ಸ್ವಂತ ಖಾತೆಗಳಿಗೇ ಜೋಡಣೆ ಮಾಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೂವು ಬೆಳೆಗಾರರು ಮತ್ತು ಮೆಕ್ಕೆ ಜೋಳ ಬೆಳೆದು ನಷ್ಟ ಹೊಂದಿದ ರೈತರಿಗೆ ತಲಾ ₹5,000 ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ಈ ಹಣ ಅವರ ಖಾತೆಗೆ ಜಮೆ ಆಗಬೇಕಿದ್ದರೆ, ಆಧಾರ್‌ ಖಾತೆಯನ್ನು ಜೋಡಣೆ ಮಾಡಲಾಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು. ಮಾಡಿಲ್ಲವಾದರೆ, ತಕ್ಷಣ ಮಾಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಇತ್ತೀಚೆಗೆ ಹಾವೇರಿ ಜಿಲ್ಲೆಯಲ್ಲಿ ರೈತರ ಸಭೆ ನಡೆಸಿದಾಗ ಕೆಲವು ರೈತರು ಬೆಳೆ ವಿಮೆ ಹಣ ಬಂದಿಲ್ಲ ಎಂದು ದೂರು ನೀಡಿದರು. 68 ರೈತರ ಮಾಹಿತಿ ತರಿಸಿದಾಗ ಕೇವಲ 8 ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆ ಆಗಿತ್ತು. ಉಳಿದ 60 ರೈತರಿಗೂ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಹಣ ಏರ್‌ಟೆಲ್‌ ಖಾತೆಗೆ ಹೋಗಿತ್ತು. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಬ್ಯಾಂಕ್‌ ಖಾತೆಯನ್ನು ಏರ್‌ಟೆಲ್‌ಗೆ ಜೋಡಣೆ ಮಾಡಿ ಆ ಸಂಖ್ಯೆ ನೀಡಿದ್ದರು ಎಂದು ಪಾಟೀಲ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.