
ಬೆಂಗಳೂರು: ‘ರೈತ ಯುವಕರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಕನಿಷ್ಠ ₹ 10 ಲಕ್ಷ ಠೇವಣಿ, ಕೃಷಿ ಅಥವಾ ಕೃಷಿ ಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಮನವಿ ಮಾಡಿದೆ.
ವಿಧಾನಸೌಧದಲ್ಲಿ ಮಂಗಳವಾರ ನಡೆದ ರೈತ ಸಂಘಟನೆಗಳ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತ ಸಂಘಟನೆಗಳು ಸಿದ್ದರಾಮಯ್ಯ ಅವರಿಗೆ ಈ ಮನವಿ ಸಲ್ಲಿಸಿವೆ.
‘ರೈತ ಯುವಕರು ಮದುವೆ ಆಗಲು ವಧು ಸಿಗದೇ ಇರುವುದು ಒಂದು ಸಾಮಾಜಿಕ ಪಿಡುಗಾಗಿರುವುದು ವಿಷಾದನೀಯ. ಈ ಸಮಸ್ಯೆಗೆ ಕಾರಣಗಳನ್ನು ಕಂಡುಹಿಡಿಯಬೇಕು. ರೈತನ ಮಗನನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ 20ರಷ್ಟು ಮೀಸಲಾತಿ ನೀಡುವ ಯೋಜನೆ ಜಾರಿಗೆ ತರಬೇಕು’ ಎಂದೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮನವಿ ಪತ್ರ ಸಲ್ಲಿಸಿದೆ.
‘ಕೃಷಿಕರು ಯಾವಾಗಲು ಅನಿಶ್ಚಿತತೆ ಎದುರಿಸುತ್ತಾ ಅಭದ್ರತೆಗೆ ಒಳಗಾಗಿದ್ದಾರೆ. ಈ ಸಾಲಿನ ಆಯವ್ಯಯದಲ್ಲಿ ಕೃಷಿವಲಯಕ್ಕೆ ಪ್ರಥಮ ಆಧ್ಯತೆ ನೀಡಿ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಮಾತು ಕೊಟ್ಟಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತ ಸ್ನೇಹಿ ಆಗಿ ಗಟ್ಟಿಗೊಳಿಸಬೇಕು. ಬಿಜೆಪಿ ಸರ್ಕಾರ ತಂದಿರುವ ಜಾನುವಾರು ಹತ್ಯೆ ನಿಷೇದ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು’ ಎಂದು ಒಕ್ಕೂಟ ಆಗ್ರಹಿಸಿದೆ.
‘ಕೃಷಿ ಬೆಲೆ ಆಯೋಗವನ್ನು ಶಾಶ್ವತ ಆಯೋಗವಾಗಿ ಘೋಷಿಸಿ, ಶಾಸನಾತ್ಮಕ ಅಧಿಕಾರ ನೀಡಬೇಕು. ಪ್ರೊ.ಎಂ.ಡಿ. ನಂಜುಂಡಸ್ವಾಮಿರವರ ಹುಟ್ಟೂರು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಮಾಡ್ರಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಮಾಡಲು ವಿಶೇಷ ಅನುದಾನ ನೀಡಬೇಕು ಮತ್ತು ಅವರ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಕಾಯ್ದೆ– 2025, ಬೀಜ ಮಸೂದೆ– 2025, ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಈ ಅಧಿವೇಶನದಲ್ಲಿ ಘೋಷಿಸಬೇಕು ಎಂದೂ ರೈತ ಸಂಘಟನೆಗಳು ಆಗ್ರಹಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.