ADVERTISEMENT

ಲ್ಯಾಂಡ್ ಡಿಫಾರ್ಮ್ಸ್ ಕಾಯ್ದೆ: ಯೋಗೇಂದ್ರ ಯಾದವ್

ರಾಜಧಾನಿಯಲ್ಲಿ ರೈತರ ಶಕ್ತಿ ಪ್ರದರ್ಶನ: ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 20:53 IST
Last Updated 21 ಸೆಪ್ಟೆಂಬರ್ 2020, 20:53 IST
 ಐಕ್ಯ ಹೋರಾಟದಲ್ಲಿ (ಎಡದಿಂದ) ರೈತ ಮುಖಂಡ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಟಿ.ಎನ್ ಪ್ರಕಾಶ್ ಕಮ್ಮರಡಿ, ಯೋಗೇಂದ್ರ ಯಾದವ್, ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್,  ಅಶೋಕ್ ದಾವಲೆ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
 ಐಕ್ಯ ಹೋರಾಟದಲ್ಲಿ (ಎಡದಿಂದ) ರೈತ ಮುಖಂಡ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಟಿ.ಎನ್ ಪ್ರಕಾಶ್ ಕಮ್ಮರಡಿ, ಯೋಗೇಂದ್ರ ಯಾದವ್, ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ್,  ಅಶೋಕ್ ದಾವಲೆ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   
""

ಬೆಂಗಳೂರು: ‘ರಾಜ್ಯ ಸರ್ಕಾರ ಭೂಸುಧಾರಣೆ (ಲ್ಯಾಂಡ್ ರಿಫಾರ್ಮ್ಸ್‌) ಕಾಯ್ದೆಯನ್ನು ವಿರೂಪ (ಡಿಫಾರ್ಮ್ಸ್‌) ಕಾಯ್ದೆಯಾಗಿ ಪರಿವರ್ತಿಸಲು ಹೊರಟಿದೆ’ ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಆರಂಭವಾಗಿರುವ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಉದ್ಘಾಟಿಸಿ ಮಾತಾಡಿದ ಅವರು, ‘ಒಪ್ಪಂದ ಕೃಷಿ ಪದ್ಧತಿ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಮುಂದೆ ರೈತರನ್ನು ಗುಲಾಮರನ್ನಾಗಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳೇ(ಎಪಿಎಂಸಿ) ಮಾಯವಾಗಲಿವೆ. ಬಹುರಾಷ್ಟ್ರೀಯ ಕಂಪನಿಗಳ ನೀಡಿದ ಬೆಲೆಯನ್ನಷ್ಟೇ ಪಡೆಯಬೇಕಾದ ಅನಿವಾರ್ಯ ಸ್ಥಿತಿ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮೋದಿಯೇ ಮಧ್ಯವರ್ತಿ:ಕಿಸಾನ್‌ ಸಂಘರ್ಷ ಸಮಿತಿಯ ಅಶೋಕ್ ದಾವಲೆ ಮಾತನಾಡಿ, ‘ಗ್ರಾಹಕರು ಮತ್ತು ರೈತರ ನಡುವೆ ಮಧ್ಯವರ್ತಿಗಳು ಇಲ್ಲದ ಸ್ಥಿತಿ ನಿರ್ಮಾಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ವಾಸ್ತವವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅವರೇ ದೊಡ್ಡ ಮಧ್ಯವರ್ತಿ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕರ್ನಾಟಕದಲ್ಲಿ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹೊಸ ಜಮೀನ್ದಾರಿ ಪದ್ಧತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಿಚಯಿಸುತ್ತಿದ್ದಾರೆ. ಈ ಮೂರು ತಿದ್ದುಪಡಿಗಳು ರೈತರ ಪಾಲಿಗೆ ಮರಣ ಶಾಸನ ಆಗುವುದರಲ್ಲಿ ಅನುಮಾನ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ತಿದ್ದುಪಡಿ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಕೋಡಿಹಳ್ಳಿ ಬಣದಿಂದ ಪ್ರತ್ಯೇಕ ಪ್ರತಿಭಟನೆ
ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿತು. ಮೆಜೆಸ್ಟಿಕ್‌ನಿಂದ ಮೆರವಣಿಗೆ ಆರಂಭಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ಆನಂದ್‌ರಾವ್ ವೃತ್ತದ ಮೇಲ್ಸೇತುವೆ ಮೇಲೆ ಪೊಲೀಸರು ತಡೆದರು. ರಸ್ತೆಯಲ್ಲೇ ಕುಳಿತು ಹಸಿರು ಶಾಲು ಬೀಸಿದ ರೈತರು, ಸರ್ಕಾರ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, 'ರಾಜ್ಯ–ಕೇಂದ್ರ ಸರ್ಕಾರಗಳು ಕೃಷಿ ವಿರೋಧಿ ನೀತಿ ಅನುಸರಿಸುತ್ತಿವೆ. ರೈತರ ಪರವಾದ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿವೆ’ ಎಂದು ಕಿಡಿ ಕಾರಿದರು.

‘ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗಲೂ ಸರ್ಕಾರ ಮಾತಿನಲ್ಲೇ ಭರವಸೆ ನೀಡಿ ಮೌನವಾಗುತ್ತಿದೆ. ಈ ಬಾರಿ ಮೌನ ಮುರಿದು ನಮ್ಮ ಬೇಡಿಕೆ ಈಡೇರಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ' ಎಂದು ಅವರು ಎಚ್ಚರಿಸಿದರು.

ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂದಾರ ದಟ್ಟಣೆ ನಿಭಾಯಿಸಲು ಪೊಲೀಸರು ಪರದಾಡಿದರು.

ಬಿ.ಸಿ. ಪಾಟೀಲ ವಿರುದ್ಧ ಆಕ್ರೋಶ
ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಟೀಕೆ ಮಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕ್ಷಮೆ ಯಾಚಿಸಬೇಕು ಎಂದುಧಾರವಾಡ ಜಿಲ್ಲೆ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ಆಗ್ರಹಿಸಿದರು.

‘ರಾತ್ರೋರಾತ್ರಿ ಪಕ್ಷ ಬದಲಾಯಿಸಿ ಬಿ.ಸಿ. ಪಾಟೀಲ ಅಧಿಕಾರ ಪಡೆದುಕೊಂಡಿದ್ದಾರೆ. ರೈತರ ಸಮಸ್ಯೆಗಳಿಗೆ ಈವರೆಗೆ ಸಣ್ಣ ಪರಿಹಾರ ನೀಡಲು ಆಗಿಲ್ಲ. ಅಂಥವರು ಸಚಿವ ಸ್ಥಾನದಲ್ಲಿರಲು ಅರ್ಹರಲ್ಲ’ ಎಂದರು.

ಹಸಿರು ಸೇನೆ ಕಾರ್ಯಕರ್ತರು ಹಸಿರು ಶಾಲು ಬೀಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

ಸುಗ್ರೀವಾಜ್ಞೆಯ ರಾಜ್ಯ
‘ಸದನದಲ್ಲಿ ಚರ್ಚೆ ನಡೆಸದೆ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕರ್ನಾಟಕವನ್ನು ಸುಗ್ರೀವಾಜ್ಞೆಯ ರಾಜ್ಯವನ್ನಾಗಿ ಪರಿವರ್ತಿಸಲಾಗುತ್ತಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರದ ಮಾದರಿಯನ್ನೇ ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಇದರ ವಿರುದ್ಧ ಅಸಹಕಾರ ಚಳವಳಿ ರೀತಿಯಲ್ಲಿ ಹೋರಾಟ ನಡೆಸಬೇಕು. ಬಹುಮತ ಇದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಹಟಮಾರಿತನ ಮುಂದುವರಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದರು.

ಐಕ್ಯ ಹೋರಾಟ: ಪ್ರತ್ಯೇಕ ಪ್ರತಿಭಟನೆ
‘ರೈತ, ದಲಿತ, ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಐಕ್ಯ ಹೋರಾಟ ನಡೆಸಲು ಯೋಚಿಸಲಾಗಿತ್ತು. ಆದರೆ, ಕೋಡಿಹಳ್ಳಿ ಚಂದ್ರಶೇಖರ್ ಅವರು ದಿಢೀರ್ ಪ್ರತ್ಯೇಕ ಪ್ರತಿಭಟನೆ ನಡೆಸಿದ್ದಾರೆ. ಕಾರಣ ಏನು ಎಂಬುದು ಗೊತ್ತಿಲ್ಲ’ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

‘‌ಪೂರ್ವಭಾವಿ ಸಭೆಗಳಿಗೆ ಅವರೂ ಭಾಗವಹಿಸಿ ಸಲಹೆಗಳನ್ನು ನೀಡಿದ್ದರು. ಒಮ್ಮತದ ತೀರ್ಮಾನದಂತೆ ಐಕ್ಯ ಹೋರಾಟ ರೂಪಿಸಿದ್ದೆವು’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ‘ಸಂಘಟನೆಗಳು ಒಟ್ಟಾಗುತ್ತಿವೆ ಎಂಬ ಖುಷಿ ಇತ್ತು. ಎಲ್ಲರ ಒಗ್ಗಟ್ಟಿನ ಹೋರಾಟಕ್ಕೆ ಬರಬೇಕು’ ಎಂದು ಕೋಡಿಹಳ್ಳಿ ಗೆ ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಕೋಡಿಹಳ್ಳಿ‌, ‘ರೈತ ಸಂಘದಲ್ಲಿ ಒಡಕು ದಿಢೀರ್ ಬಂದಿಲ್ಲ. ಮೊದಲಿನಿಂದಲೂ ಇದೆ. ದೊರೆಸ್ವಾಮಿ ಅವರ ಆಶಯ ಸರಿಯಾಗಿದೆ. ಕೆಲವರು ಶಿಸ್ತುಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅದಕ್ಕಾಗಿ ಕಾಯೋಣ’ ಎಂದರು.

ಕುಸಿದು ಬಿದ್ದ ರೈತ
ಪ್ರತಿಭಟನಾ ರ‍್ಯಾಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರ ನಂಜನಗೂಡಿನ ರವಿಎಂಬುವರು ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದರು.ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.

ವಾಹನ ದಟ್ಟಣೆ
ಪ್ರತಿಭಟನೆ ಕಾರಣದಿಂದಕೆಎಸ್‌ಆರ್ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ತನಕವಾಹನ ದಟ್ಟಣೆ ಉಂಟಾಗಿತ್ತು.

ಆನಂದ್ ರಾವ್ ವೃತ್ತ, ಮೆಜೆಸ್ಟಿಕ್, ಶೇಷಾದ್ರಿ ರಸ್ತೆ, ರೇಸ್‌ಕೋರ್ಸ್ ರಸ್ತೆ, ನೃಪತುಂಗ ರಸ್ತೆ, ಬಸವೇಶ್ವರ ವೃತ್ತ, ಕೆ.ಆರ್.ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯಾಹ್ನ 3 ಗಂಟೆಯ ನಂತರ ದಟ್ಟಣೆ ಕಡಿಮೆ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.