ADVERTISEMENT

ರೈತರಿಂದ ಪ್ರತಿಭಟನೆ: ಜನರಿಗೆ ತೊಂದರೆ ಆಗದಂತೆ ವ್ಯವಸ್ಥೆ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 8:01 IST
Last Updated 6 ಫೆಬ್ರುವರಿ 2021, 8:01 IST
ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ರೈತರು ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ರಾಜ್ಯದಾದ್ಯಂತ ರೈತ ಸಂಘಟನೆಗಳು ಹೆದ್ದಾರಿ ಚಳವಳಿ ಮಾಡುತ್ತಿವೆ. ಎಲ್ಲ ಜಿಲ್ಲೆಗಳಲ್ಲಿ ರೈತ ಸಂಘಟನೆಗಳ ಜೊತೆ ಮಾತನಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ‌ಮಾಡಿದ್ದೇವೆ’ ಎಂದರು.

ಲಿಂಗಾಯತರಿಗೆ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಪಂಚಮಸಾಲಿ ಲಿಂಗಾಯತ ಸಮುದಾಯ ಹಿಂದುಳಿದ ವರ್ಗ ಎಂದು ಗುರುತಿಸಿದವರು ಯಡಿಯೂರಪ್ಪ. ಹಿಂದಿನ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 3 ಬಿ ಗುರುತಿಸಿದ್ದೇ ಯಡಿಯೂರಪ್ಪ. ಈ ಕೆಲಸವನ್ನು ಬೇರೆ ಯಾರೂ ಮಾಡಲಿಲ್ಲ. ಈಗ 2ಎ ಮೀಸಲಾತಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆಯನ್ನೂ ಹಿಂದುಳಿದ ವರ್ಗಗಳ‌ ಆಯೋಗಕ್ಕೆ ಮುಖ್ಯಮಂತ್ರಿ ಕಳುಹಿಸಿಕೊಟ್ಟಿದ್ದಾರೆ. ಈ ಬೇಡಿಕೆ ಸಂಬಂಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೆಲವು ರಾಜ್ಯಗಳು ಇದೇ ಪ್ರಸ್ತಾವನೆ ಮಾಡಿದಾಗ ನ್ಯಾಯಾಲಯ ತಡೆ ನೀಡಿರುವುದು ಇದೆ. ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ’ ಎಂದು ವಿವರಿಸಿದರು.

‘ಹಿಂದುಳಿದ ವರ್ಗಗಳ ಆಯೋಗದಿಂದ ಶಿಫಾರಸು ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗ ನಿರ್ಧಾರ ಕೈಗೊಳ್ಳಲಿದೆ. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದು ಕೇಂದ್ರ ನಿರ್ಧರಿಸಬೇಕಾದ ವಿಚಾರ. ಮುಖ್ಯಮಂತ್ರಿ ಕೂಡಾ ಕೇಂದ್ರದ ಜೊತೆ ಈ‌ ಬಗ್ಗೆ ಚರ್ಚೆ ಮಾಡಬೇಕು ಎಂದಷ್ಟೆ ಹೇಳಿದ್ದಾರೆ’ ಎಂದರು.

ಮುಖ್ಯಮಂತ್ರಿ ಹೇಳಿಕೆಗೆ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ಬೊಮ್ಮಾಯಿ, ‘ಹಿಂದುಳಿದ ವರ್ಗಗಳಿಗೆ ಸೇರಿಸುವುದರಲ್ಲಿ ಎರಡು ರೀತಿ ಇದೆ. ಒಂದು ರಾಜ್ಯಕ್ಕೆ ಆ ನಿರ್ಧಾರ ಸೀಮಿತ . ಇನ್ನೊಂದು ಕೇಂದ್ರಕ್ಕೆ ಸೀಮಿತ. ಅದನ್ನು ಕೇಂದ್ರದ ನಾಯಕರ ಜೊತೆ ಚರ್ಚಿಸಬೇಕು ಎಂದಿದ್ದಾರೆ. ಅದನ್ನು ಹೊರತು, ಬೇರೆ ತಪ್ಪು ಅರ್ಥ ಕಲ್ಪಿಸುವುದು ಬೇಡ. ಸಚಿವರ ಮೂಲಕ ಸ್ವಾಮೀಜಿಗಳಿಗೆ ಈಗಾಗಲೇ ಮುಖ್ಯಮಂತ್ರಿ ಸಂದೇಶ ರವಾನಿಸಿದ್ದಾರೆ. ಆ ಕಾರಣಕ್ಕೆ ಶುಕ್ರವಾರ ಸಂಜೆ ಆದೇಶ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.+

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.