ADVERTISEMENT

ಗೇಮ್‌ ಆಡುತ್ತಿದ್ದಾಗ ಮೊಬೈಲ್‌ ಕಿತ್ತುಕೊಂಡಿದ್ದಕ್ಕೆ ತಂದೆಯನ್ನೇ ಕೊಚ್ಚಿ ಕೊಂದ ಮಗ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 12:44 IST
Last Updated 9 ಸೆಪ್ಟೆಂಬರ್ 2019, 12:44 IST
ರಘುವೀರ ಕುಂಬಾರ
ರಘುವೀರ ಕುಂಬಾರ   

ಬೆಳಗಾವಿ: ಗೇಮ್‌ ಆಡುತ್ತಿದ್ದುದ್ದನ್ನು ಪ್ರಶ್ನಿಸಿ ಮೊಬೈಲ್‌ ಫೋನ್‌ ಕಿತ್ತುಕೊಂಡಿದ್ದಕ್ಕೆ ಕೋಪಗೊಂಡ ಯುವಕ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಕಾಕತಿ ಗ್ರಾಮದ ಸಿದ್ದೇಶ್ವರ ನಗರದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ನಿವೃತ್ತ ಡಿಎಆರ್‌ ಪೊಲೀಸ್ (ಕಾರ್ಪೆಂಟರ್‌) ಶಂಕರಪ್ಪ ರಾವಪ್ಪ ಕುಂಬಾರ (61) ಮೃತ. ರಘುವೀರ ಶಂಕರ ಕುಂಬಾರ (21) ಆರೋಪಿ.

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಯರಗುಪ್ಪಿಯವರಾದ ಶಂಕರಪ್ಪ ಮಗನನ್ನು ಡಿಪ್ಲೊಮಾ ಓದಿಸುವುದಕ್ಕಾಗಿ ಕಾಕತಿಯಲ್ಲಿ ವಾಸವಿದ್ದರು.

ADVERTISEMENT

ವಿವರ: ‘ಭಾನುವಾರ ತಡರಾತ್ರಿಯಾದರೂ ಮೊಬೈಲ್ ನೋಡುತ್ತಿದ್ದ ಮಗನಿಗೆ ಶಂಕರಪ್ಪ ಬುದ್ಧಿ ಹೇಳಿದ್ದರು. ಮುಂಜಾನೆ 4.30ರ ಸುಮಾರಿಗೆ ಎದ್ದ ಅವರು ಪುತ್ರ ಮೊಬೈಲ್‌ನಲ್ಲಿ ಮುಳುಗಿದ್ದುದ್ದನ್ನು ಗಮನಿಸಿ ಕಿತ್ತುಕೊಂಡಿದ್ದಾರೆ. ಆಗ ರಘುವೀರ ಜಗಳ ತೆಗೆದಿದ್ದಾನೆ. ಮಧ್ಯಪ್ರವೇಶಿಸಿದ ತಾಯಿಯನ್ನು ಹೊರಕ್ಕೆ ತಳ್ಳಿ ಚಿಲಕ ಹಾಕಿಕೊಂಡಿದ್ದಾನೆ. ಇಳಿಗೆಮಣೆಯಿಂದ ತಂದೆಯ ಕುತ್ತಿಗೆ ಹಾಗೂ ಎಡಗಾಲನ್ನು ಕತ್ತರಿಸಿ ಬೇರ್ಪಡಿಸಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಆತನ ಮಾನಸಿಕ ಸ್ಥಿತಿ ಸರಿ ಇದ್ದಂತಿಲ್ಲ’ ಎಂದು ಕಾಕತಿ ಠಾಣೆ ಇನ್‌ಸ್ಪೆಕ್ಟರ್‌ ಎಸ್‌.ಎಸ್. ಕೌಜಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ದ್ವಿತೀಯ ಪಿಯು (ವಿಜ್ಞಾನ) ಫೇಲಾಗಿದ್ದ ಆರೋಪಿ, ಸದ್ಯ ಡಿಪ್ಲೊಮಾ 2ನೇ ಸೆಮಿಸ್ಟರ್‌ನಲ್ಲಿದ್ದ. ಮೊದಲ ಸೆಮಿಸ್ಟರ್‌ನಲ್ಲಿ 2 ವಿಷಯ ಬಾಕಿ ಉಳಿಸಿಕೊಂಡಿದ್ದ. ಸದಾ ಮೊಬೈಲ್‌ನಲ್ಲಿ ಪಬ್‌ಜಿ ಇತ್ಯಾದಿ ಗೇಮ್‌ಗಳನ್ನು ಆಡುತ್ತಿದ್ದ. ಶನಿವಾರ ಮನೆಯವರು ಮೊಬೈಲ್‌ ಕಿತ್ತಿಟ್ಟುಕೊಂಡಿದ್ದರಿಂದ ಸಿಟ್ಟಾಗಿ ಪಕ್ಕದ ಮನೆಗೆ ಕಲ್ಲೆಸೆದು ಕಿಟಕಿ ಗಾಜು ಒಡೆದಿದ್ದ. ಆತನನ್ನು ಕರೆಸಿದ್ದ ಪೊಲೀಸರು ಪೋಷಕರ ಎದುರಿನಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಬಂಧಿಸಿ ಕರೆ ತಂದಾಗಲೂ ಆತ ಠಾಣೆಯಲ್ಲಿ ಮೊಬೈಲ್‌ ಕೇಳುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಸ್ಥಳಕ್ಕೆ ಗ್ರಾಮೀಣ ಎಸಿಪಿ ಶಿವಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.