ADVERTISEMENT

ಶುಲ್ಕ ಗೊಂದಲ: ಮತ್ತೆ ಗುದ್ದಾಟ

ಪೂರ್ತಿ ಶುಲ್ಕ ಅನಿವಾರ್ಯ:ಖಾಸಗಿ ಶಾಲಾಡಳಿತ l ಸರ್ಕಾರವೇ ತೀರ್ಮಾನಿಸಲಿ: ಪೋಷಕರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 20:27 IST
Last Updated 13 ಜೂನ್ 2021, 20:27 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರ ಕಗ್ಗಂಟಾಗಿದ್ದು, ಪೋಷಕರು ಪೂರ್ಣ ಶುಲ್ಕ ಪಾವತಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನೆ ಹಾದಿ ತುಳಿದಿದ್ದರೆ, ಪೂರ್ಣ ಶುಲ್ಕ ಪಾವತಿಸಲೇಬೇಕು ಎಂದುಶಾಲಾ ಆಡಳಿತ ಮಂಡಳಿಗಳು ಪಟ್ಟು ಹಿಡಿದಿವೆ. ಈ ಬಿಕ್ಕಟ್ಟು ಬಗೆಹರಿಸಲು ಸರ್ಕಾರದ ಮಧ್ಯ ಪ್ರವೇಶ ಅನಿವಾರ್ಯವಾಗಿದೆ.

ಇದರಿಂದಾಗಿ ಈ ವರ್ಷವೂ (2021–22) ಖಾಸಗಿ ಶಾಲಾ ಶುಲ್ಕ ಗೊಂದಲ ಮುಂದುವರಿಯುವುದು ನಿಚ್ಚಳವಾಗಿದೆ. ಜುಲೈ 1ರಿಂದ ಶೈಕ್ಷಣಿಕ ವರ್ಷದ ತರಗತಿ ಆರಂಭಿಸಲು ಹಾಗೂ ಮಂಗಳವಾರದಿಂದ (ಜೂನ್ 15) ದಾಖಲಾತಿ ಪ್ರಕ್ರಿಯೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ, ಶುಲ್ಕದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಕೋವಿಡ್‌ ಕಾರಣಕ್ಕೆ ಖಾಸಗಿ ಶಾಲೆಗಳು ಹಿಂದಿನ ಶೈಕ್ಷಣಿಕ ಸಾಲಿನ (2020–21) ಶುಲ್ಕದಲ್ಲಿ ಶೇ 70ರಷ್ಟು ಬೋಧನಾ ಶುಲ್ಕ ಮಾತ್ರ ಪಡೆ
ಯಬೇಕೆಂದು 2021ರ ಜ. 29 ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಸಂಘಗಳು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.

ADVERTISEMENT

ಈ ಮಧ್ಯೆ, ಈ ಸಾಲಿಗೆ ಪೂರ್ತಿ ಶುಲ್ಕ ಪಡೆಯಲು ಖಾಸಗಿ ಶಾಲಾಡಳಿತ ಮಂಡಳಿಗಳು ಶಿಕ್ಷಕ, ಶಿಕ್ಷಕೇತರ ಸಮನ್ವಯ ಸಮಿತಿ ನಿರ್ಧರಿಸಿದೆ. ‘ಸರ್ಕಾರ ಶೇ 30ರಷ್ಟು ಶುಲ್ಕ ಕಡಿತ ಮಾಡಿರುವುದು 2020-21ನೇ ಸಾಲಿಗೆ ಮಾತ್ರ ಸೀಮಿತ. 2018-19ನೇ ಸಾಲಿನಲ್ಲಿ (ಕೋವಿಡ್‌ ಪೂರ್ವ) ಯಾವ ಶುಲ್ಕವಿತ್ತೋ ಅದೇ ಶುಲ್ಕವನ್ನು ಪಡೆಯಲು ನಿರ್ಧರಿಸಿದ್ದೇವೆ’ ಎಂದು ಸಮಿತಿಯ ಸಂಚಾಲಕ ಡಿ. ಶಶಿಕುಮಾರ್ ಹೇಳಿದರು.

‘ಈ ಬಾರಿ ಕೂಡಾ ಸರ್ಕಾರ ಶೇ 30 ರಷ್ಟು ಶುಲ್ಕ ಕಡಿತಗೊಳಿಸಿದರೆ, ಆ ಆದೇಶ ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ಪೂರ್ಣ ಶುಲ್ಕ ಪಡೆಯುವುದು ಅನಿವಾರ್ಯ. ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡುತ್ತಿಲ್ಲ. ಎರಡು ವರ್ಷದ ಹಿಂದೆ ಎಷ್ಟು ಶುಲ್ಕವಿತ್ತೊ ಅದನ್ನು ಪಡೆಯುತ್ತೇವೆ’ ಎಂದರು.

ಅದಕ್ಕೆ ಪೋಷಕರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ‘ಅನೇಕ ಶಾಲೆಗಳು ಪೂರ್ಣ ಶುಲ್ಕ ಪಾವತಿಗೆ ಮೇಲಿಂದ ಮೇಲೆ ಒತ್ತಾಯಿಸುತ್ತಿವೆ. ಆನ್‌ಲೈನ್‌ ತರಗತಿಗೆ ಪೂರ್ಣ ಶುಲ್ಕ ಪಡೆಯುವುದು ಎಷ್ಟು ಸರಿ? ಸರ್ಕಾರ ಈ ಕುರಿತು ಶೀಘ್ರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಖಾಸಗಿ ಶಾಲಾ ವಿದ್ಯಾರ್ಥಿಗಳ ಪಾಲಕ, ಪೋಷಕ ಸಂಘಟನೆಗಳು ಆಗ್ರಹಿಸಿವೆ.

‘ಎ.ಜಿ ಜೊತೆ ಚರ್ಚಿಸಿ ತೀರ್ಮಾನ’:

‘ಶುಲ್ಕ ವಿಷಯದಲ್ಲಿ ಖಾಸಗಿ ಶಾಲೆಯವರು ಮತ್ತು ಪೋಷಕರು ಹೊಂದಾಣಿಕೆಗೆ ಬರಬೇಕು. ಪೋಷಕರ ಸ್ಥಿತಿಗತಿಯನ್ನು ಶಾಲೆಯವರು ಅರ್ಥ ಮಾಡಿಕೊಳ್ಳಬೇಕು. ಶುಲ್ಕ ಕಟ್ಟದಿದ್ದರೆ ಶಿಕ್ಷಕರಿಗೆ ಸಂಬಳ ಕೊಡುವವರು ಯಾರು ಎನ್ನುವುದು ಖಾಸಗಿ ಶಾಲೆಯವರ ಪ್ರಶ್ನೆ.

ಪೂರ್ತಿ ಶುಲ್ಕ ತೆಗೆದುಕೊಂಡವರೂ ಪೂರ್ತಿ ವೇತನ ಕೊಟ್ಟಿಲ್ಲವೆನ್ನುವುದು ಬೇರೆ ವಿಚಾರ. ಶುಲ್ಕ ವಿಚಾರದಲ್ಲಿ ಶಾಲೆಗಳ ಮೇಲೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಬಾರದು, ಶಾಲೆಗಳು ಪೋಷಕರಿಗೆ ಯಾವುದೇ ತೊಂದರೆ ಕೊಡಬಾರದು. ಶುಲ್ಕ ಕಟ್ಟಿಲ್ಲವೆಂದು ಆನ್‌ಲೈನ್ ಶಿಕ್ಷಣ ಸ್ಥಗಿತಗೊಳಿಸಬಾರದು, ಫಲಿತಾಂಶ ತಡೆ ಹಿಡಿಯಬಾರದು, ಪೋಷಕರಿಂದ ಮುಚ್ಚಳಿಕೆ ತೆಗೆದುಕೊಂಡು ಶಿಕ್ಷಣ ಕೊಡಬೇಕು ಎಂದು ಮಧ್ಯಂತರ ಆದೇಶದಲ್ಲಿ ಕೋರ್ಟ್‌ ಹೇಳಿದೆ. ಕೋರ್ಟ್‌ ಇನ್ನೂ ಅಂತಿಮ ತೀರ್ಪು ಕೊಟ್ಟಿಲ್ಲ. ಮತ್ತೆ ಸಮಸ್ಯೆ ಎದುರಾಗಿದೆ. ಹೀಗಾಗಿ, ಅಡ್ವೊಕೇಟ್‌ ಜನರಲ್‌ (ಎ.ಜಿ) ಜೊತೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.