ADVERTISEMENT

ಭ್ರೂಣಹತ್ಯೆ ಪ್ರಕರಣ: ಇಬ್ಬರು ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 18:28 IST
Last Updated 30 ನವೆಂಬರ್ 2023, 18:28 IST
ಮೈಸೂರಿನ ಮಾತಾ ಆಸ್ಪತ್ರೆಗೆ ಗುರುವಾರ ಸಂಜೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು
ಮೈಸೂರಿನ ಮಾತಾ ಆಸ್ಪತ್ರೆಗೆ ಗುರುವಾರ ಸಂಜೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು   

ಮೈಸೂರು: ‘ಭ್ರೂಣಹತ್ಯೆ ಪ್ರಕರಣ ದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಲೋಪ ಕಾಣುತ್ತಿದ್ದು, ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ರಾಜೇಶ್ವರಿ ಹಾಗೂ ಈ ಹಿಂದೆ ಇಲ್ಲಿ ಕುಟುಂಬ ಕಲ್ಯಾಣ ಅಧಿಕಾರಿಯಾಗಿದ್ದ ರವಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಯುಕ್ತರಿಗೆ ಸೂಚಿಸಿರುವೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‌‘ಇದು ರಾಜ್ಯದಾದ್ಯಂತ ಇರುವ ಜಾಲ. ನಮ್ಮ ಇಲಾಖೆಯಲ್ಲಿ ಆಗಿರುವ ಲೋಪದ ಬಗ್ಗೆ ಮುಚ್ಚುಮರೆ ಇಲ್ಲ’ ಎಂದರು.

‘‌ದಾಖಲೆ ಪ್ರಕಾರ 270 ಭ್ರೂಣಹತ್ಯೆ ನಡೆದಿದೆ. ಹೆಚ್ಚೂ ಆಗಿರಬಹುದು. ಎಷ್ಟು ವರ್ಷದಿಂದ ನಡೆದಿದೆಯೆಂಬುದು ಗೊತ್ತಿಲ್ಲ. ‌ಬಂಧಿತರಾಗಿರುವವರು ಯಾರೂ ವೈದ್ಯರಲ್ಲ. ಎಲ್ಲ ಲ್ಯಾಬ್ ಟೆಕ್ನೀಷಿಯನ್‌ಗಳು. ಮೈಸೂರು ಮಾತಾ ಆಸ್ಪತ್ರೆ ಮಾಲೀಕ ಚಂದನ್ ಬಲ್ಲಾಳ್ ಕೂಡ ವೈದ್ಯನಲ್ಲ’ ಎಂದರು.

ADVERTISEMENT

ಉದಯಗಿರಿಯ ಮಾತಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರು ಡಾ.ರಾಜೇಶ್ವರಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಈಗ್ಯಾಕೆ ನೋಟಿಸ್ ಅಂಟಿಸಿದ್ದೀರ? ಇಲ್ಲಿ ಆಸ್ಪತ್ರೆಯಿತ್ತೆಂದು ಗೊತ್ತಿರಲಿಲ್ಲವಾ’ ಎಂದು ಪ್ರಶ್ನಿಸಿದರು.

‘2 ವರ್ಷದಿಂದ ಕೆಲಸ ಮಾಡುತ್ತಿ ದ್ದೇನೆ. ನಾನು ಬಂದಾಗಿನಿಂದ ಇಲ್ಲಿ ಆಸ್ಪತ್ರೆ ಇಲ್ಲ. ಲೆಟರ್‌ ಹೆಡ್‌ ನಲ್ಲಿ ತಪ್ಪಾಗಿ ಹಳೇ ದಿನಾಂಕ ನಮೂದಾ ಗಿದೆ’ ಎಂದು ವೈದ್ಯೆ ಸಮಜಾಯಿಷಿ ನೀಡಿದರು.

ಕೂಡಲೇ ಸ್ಥಳೀಯರನ್ನು ಸಚಿವರು ಪ್ರಶ್ನಿಸಿದಾಗ, ಕೆಲ ತಿಂಗಳವರೆಗೂ ಇಲ್ಲಿ ಆಸ್ಪತ್ರೆ ಕಾರ್ಯ ನಿರ್ವಹಿಸಿದ್ದಾಗಿ ಹೇಳಿದರು. ಇದರಿಂದ ಸಚಿವರು ಅಧಿಕಾರಿಗಳ ವಿರುದ್ಧ ಇನ್ನಷ್ಟು ಸಿಟ್ಟಾದರು.

ನಂತರ ಸಚಿವರು ನಗರದ ಅತಿಥಿ ಗೃಹದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಡಿಎಚ್‌ಒ ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.