ವಿಧಾನಸೌಧ
ನವದೆಹಲಿ: ‘ರಾಜ್ಯದಲ್ಲಿ ಶೇ 60ರಷ್ಟು ಕೃಷಿ ಬಿತ್ತನೆ ಪೂರ್ಣಗೊಂಡಿದ್ದು, ಅಗತ್ಯ ಪ್ರಮಾಣದ ಡಿಎಪಿ ಹಾಗೂ ಯೂರಿಯಾ ರಸಗೊಬ್ಬರ ಒದಗಿಸಬೇಕು’ ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸೋಮವಾರ ಮನವಿ ಮಾಡಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರನ್ನು ಇಲ್ಲಿ ಭೇಟಿ ಮಾಡಿದ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಈ ಮನವಿ ಮಾಡಿದರು. ‘ಯೂರಿಯಾ ಬಳಕೆಯನ್ನು ಶೇ 50ರಷ್ಟು ಕಡಿಮೆ ಮಾಡುವಂತೆ ಕೇಂದ್ರ ಸೂಚಿಸಿದೆ. ಈ ವರ್ಷ ರಾಜ್ಯದ ರೈತರಿಗೆ ಬೇಕಿರುವ ಯೂರಿಯಾ ಪೂರೈಸಲು ದಾಸ್ತಾನು ಮಾಡಿಕೊಳ್ಳಲಾಗಿದೆ. ಮುಂದಿನ ವರ್ಷದಿಂದ ಸಮಸ್ಯೆಯಾಗಲಿದೆ’ ಎಂದು ಸಚಿವರು ಗಮನಕ್ಕೆ ತಂದರು.
‘ರಾಜ್ಯದಲ್ಲಿ ಮುಂಗಾರು ಬಿತ್ತನೆ ಹಂಗಾಮಿಗೆ 4 ಲಕ್ಷ ಟನ್ ಡಿಎಪಿಯನ್ನು ಕೇಂದ್ರ ಹಂಚಿಕೆ ಮಾಡಿದೆ. ಏಪ್ರಿಲ್‌ನಿಂದ ಜುಲೈ ವರೆಗೆ 3.02 ಲಕ್ಷ ಟನ್ ಡಿಎಪಿ ಅಗತ್ಯ ಇದೆ. ಈ ಸಲ ಮುಂಗಾರು ಅವಧಿಗಿಂತ ಮುಂಚಿತವಾಗಿ ಪ್ರವೇಶಿಸಿದ್ದು, ಕೃಷಿ ಚಟುವಟಿಕೆಗೆ ಬಿರುಸಿನಿಂದ ಸಾಗಿದೆ. ಬೇಡಿಕೆಯ ಅವಧಿಯಲ್ಲಿ ರೈತರಿಗೆ ಡಿಎಪಿ ಪೂರೈಸಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಅವರು ಮನವಿ ಮಾಡಿದರು.
‘ಮುಂಗಾರು ಹಂಗಾಮಿಗೆ 11.17 ಲಕ್ಷ ಟನ್ ಯೂರಿಯಾ ಹಂಚಿಕೆ ಮಾಡಲಾಗಿದೆ. ಏಪ್ರಿಲ್‌ನಿಂದ ಜುಲೈ ವರೆಗೆ 6.80 ಲಕ್ಷ ಟನ್ ಯೂರಿಯಾ ಅಗತ್ಯವಿದೆ. ಆದರೆ, ಈವರೆಗೆ ರಾಜ್ಯಕ್ಕೆ 3.98 ಲಕ್ಷ ಟನ್ ಯೂರಿಯಾ ಪೂರೈಕೆ ಆಗಿದೆ. ಜುಲೈ ತಿಂಗಳಲ್ಲಿ 2.25 ಲಕ್ಷ ಟನ್ ಯೂರಿಯಾ ಬೇಕಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ರೈತರು ಅತೀ ಹೆಚ್ಚು ಯೂರಿಯಾ ಬಳಕೆ ಮಾಡುತ್ತಾರೆ. ಹೀಗಾಗಿ, ಕೇಂದ್ರವು ಅಗತ್ಯ ಪ್ರಮಾಣದ ರಸಗೊಬ್ಬರ ಸರಬರಾಜು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
‘ಮುಂಗಾರು ಹಂಗಾಮಿನಲ್ಲಿ ರಾಗಿ ಹಾಗೂ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಹಿಂಗಾರಿನಲ್ಲಿ ಜೋಳ ಹಾಗೂ ರಾಗಿ ಬೆಳೆಯಲಾಗುತ್ತಿದೆ. ಹಿಂಗಾರಿನಲ್ಲಿ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕೇಂದ್ರ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
‘ಸಂಶೋಧನಾ ಚಟುವಟಿಕೆಗಳಿಗೆ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಖಾಸಗಿ ಸಂಸ್ಥೆಗಳಿಂದ ನೆರವು ಪಡೆಯುತ್ತಿವೆ. ಇದಕ್ಕೆ ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರಿಂದ ಹೊರೆಯಾಗಿದೆ. ಈ ಅನುದಾನಕ್ಕೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು ಎಂದು ಕೃಷಿ ಸಚಿವಾಲಯವು ಜಿಎಸ್‌ಟಿ ಮಂಡಳಿಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಅವರು ಮನವಿ ಮಾಡಿದರು.
ಕೃಷಿ ನವೋದ್ಯಮ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಕೃಷಿ ನವೋದ್ಯಮ ಮೂಲನಿಧಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಬೇಕು ಎಂದು ಅವರು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.