ADVERTISEMENT

ಜಾಗತಿಕ ತಾಪಮಾನ ವಿರುದ್ಧ ಸಂಘಟಿತ ಹೋರಾಟ ಅಗತ್ಯ: ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 4:45 IST
Last Updated 6 ಫೆಬ್ರುವರಿ 2023, 4:45 IST
   

ಬೆಂಗಳೂರು: ‘ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನ ಬದಲಾವಣೆಯಿಂದ ಸೃಷ್ಟಿಯಾಗುವ ಸವಾಲುಗಳನ್ನು ಎದುರಿಸಲು ಜಿ-20 ಗುಂಪಿನ ರಾಷ್ಟ್ರಗಳು ಸಂಘಟಿತ ಹೋರಾಟ ನಡೆಸಬೇಕಾಗಿದೆ’ ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಹೇಳಿದರು.

ನಗರದಲ್ಲಿ ಭಾನುವಾರ ಆರಂಭವಾದ ಜಿ-20 ರಾಷ್ಟ್ರಗಳ ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾಗತಿಕ ತಾಪಮಾನ ತಗ್ಗಿಸುವುದು, ಹಸಿರು ಇಂಧನದ ಬಳಕೆಯ ಹೆಚ್ಚಳ ಕೇವಲ ಮಾತಿಗೆ ಸೀಮಿತವಾಗಬಾರದು. ಎಲ್ಲ ರಾಷ್ಟ್ರಗಳೂ ಈ ನಿಟ್ಟಿನಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಬದ್ಧತೆ ತೋರಬೇಕು’ ಎಂದರು.

2030ರ ವೇಳೆಗೆ ಮಾಲಿನ್ಯದ ಪ್ರಮಾಣವನ್ನು ಶೇ 45ರಷ್ಟು ತಗ್ಗಿಸುವ ಗುರಿ ಸಾಧನೆಗೆ ಭಾರತವು ಬದ್ಧವಾಗಿದೆ. 2030ರ ವೇಳೆಗೆ ದೇಶವು ಶೇಕಡ 50ರಷ್ಟು ಇಂಧನವನ್ನು ಪಳೆಯುಳಿಕೆಯೇತರ ಸಂಪನ್ಮೂಲಗಳನ್ನು ಪಡೆಯಲು ಯೋಜನೆಗಳನ್ನು ಆರಂಭಿಸಿದೆ. ಹವಾಮಾನ ಬದಲಾವಣೆಯ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ ಭಾರತವು ಜಗತ್ತಿನ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರವು ಜಾರಿಗೊಳಿಸಿದ ಇಂಧನ ಉಳಿತಾಯ ಯೋಜನೆಗಳ ಪರಿಣಾಮವಾಗಿ 2.67 ಕೋಟಿ ಟನ್‌ ಇಂಗಾಲ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಸುಮಾರು ₹ 1,850 ಕೋಟಿಯಷ್ಟು ಉಳಿತಾಯವಾಗಿದೆ ಎಂದು ತಿಳಿಸಿದರು.

ವಿಶೇಷ ಭಾಷಣ ಮಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಭಾರತೀಯರು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಪ್ರಕೃತಿ ಸ್ನೇಹಿಯಾದ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಅನುಸರಿಸುತ್ತಾರೆ. ಮರುಬಳಕೆಯ ಆರ್ಥಿಕತೆಯು ನಮ್ಮ ಸಂಸ್ಕೃತಿ ಹಾಗೂ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ’ ಎಂದರು.

ಬ್ರೆಜಿಲ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನವೀಕರಿಸಬಹುದಾದ ಇಂಧನ ವಿಭಾಗದ ಮುಖ್ಯಸ್ಥ ರೆನಾಟೊ ಡೊಮಿತ್‌ ಗೊಡಿನ್ಹೋ, ಕೇಂದ್ರ ಇಂಧನ ಸಚಿವಾಲಯದ ಕಾರ್ಯದರ್ಶಿ ಅಲೋಕ್‌ ಕುಮಾರ್‌, ಭಾರತದ ಜಿ-20 ಶೆರ್ಫಾ ಅಭಯ್‌ ಠಾಕೂರ್‌, ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್‌ ಮಾತನಾಡಿದರು. ವಿಶ್ವ ಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌, ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ಸಭೆಯ ಸಹಭಾಗಿತ್ವ ವಹಿಸಿವೆ. ಜಿ-20 ಗುಂಪಿನ ಒಂಬತ್ತು ವಿಶೇಷ ಆಹ್ವಾನಿತ ಅತಿಥಿ ದೇಶಗಳು ಸೇರಿದಂತೆ 150ಕ್ಕೂ ಹೆಚ್ಚು ಪ್ರತಿನಿಧಿಗಳು ಮೂರು ದಿನಗಳ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.