ADVERTISEMENT

ಮಾರ್ಚ್ 1ರಿಂದ ಚಲನಚಿತ್ರೋತ್ಸವ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 14:40 IST
Last Updated 6 ಜನವರಿ 2025, 14:40 IST
ಮುಖ್ಯಮಂತ್ರಿ ಸಿದ್ದರಾಮಯ್ಯ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಪಾಲ್ಗೊಂಡಿದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಪಾಲ್ಗೊಂಡಿದ್ದರು   

ಬೆಂಗಳೂರು: 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಮುಖ್ಯಮಂತ್ರಿಯವರ ಗೃಹಕಚೇರಿ ‘ಕೃಷ್ಣಾ’ದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದರು.

ಈ ಸಾಲಿನ ಚಲನ ಚಿತ್ರೋತ್ಸವವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಆಶಯದಡಿ ನಡೆಯಲಿದೆ. ಕಳೆದ ಬಾರಿ ‘ಸಾಮಾಜಿಕ ನ್ಯಾಯ’ ಎಂಬ ಆಶಯದಡಿ ನಡೆದಿತ್ತು. ಚಿತ್ರೋತ್ಸವಕ್ಕೆ ₹12 ಕೋಟಿ ಕೇಳಿದ್ದರು. ₹9 ಕೋಟಿ ಸಾಕು ಎಂದು ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.

ADVERTISEMENT

ಸುಮಾರು 60 ದೇಶಗಳು ಈ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದು, ಕನ್ನಡ ಸೇರಿ ವಿವಿಧ ಭಾಷೆಗಳ ಒಟ್ಟಾರೆ 200 ಚಲನಚಿತ್ರಗಳು 13 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ. ಬೆಂಗಳೂರು ಮತ್ತು ರಾಜ್ಯದ ನಾಗರಿಕರಿಗೆ ಅಂತರರಾಷ್ಟ್ರೀಯ ಚಲನಚಿತ್ರ ವೀಕ್ಷಿಸಲು, ಇದೊಂದು ಸುವರ್ಣ ಅವಕಾಶ ಎಂದು ಸಿದ್ದರಾಮಯ್ಯ ತಿಳಿಸಿದರು.

ಮಾರ್ಚ್‌1 ರಂದು ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ. ಸೆಲೆಬ್ರಿಟಿ ಯಾರನ್ನು ಕರೆಸಬೇಕು ಎಂಬುದನ್ನು ಸಮಿತಿಯೇ ತೀರ್ಮಾನಿಸಲಿದೆ. ಈ ಉತ್ಸವಕ್ಕೆ ರಾಯಭಾರಿ ಯಾರು ಎನ್ನುವುದನ್ನೂ ಸಮಿತಿಯೇ ತೀರ್ಮಾನಿಸುತ್ತದೆ. ಸುಮಾರು ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮೈಸೂರಿನಲ್ಲಿ ಚಿತ್ರನಗರಿ:

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಲು ಸರ್ಕಾರ ಈಗಾಗಲೇ 110 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿದ್ದು, ಪಿಪಿಪಿ ಮಾದರಿಯಲ್ಲಿ ಚಿತ್ರನಗರಿಯನ್ನು ನಿರ್ಮಾಣದ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರ ವೀಕ್ಷಿಸುವಿರೇ ಎಂಬ ಪ್ರಶ್ನೆಗೆ, ‘ಸಿನಿಮಾ ನೋಡುವುದನ್ನೇ ಬಿಟ್ಟಿದ್ದೀನಿ. ಒಳ್ಳೆಯ ಸಿನಿಮಾ ಬಂದರೆ ನೋಡುತ್ತೇನೆ. ಯಾವುದಾದರೂ ಒಳ್ಳೆ ಸಿನಿಮಾ ಬಂದಿದೆಯಾ’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.