ADVERTISEMENT

‘ರಣಂ’ ಸಿನಿಮಾ ಶೂಟಿಂಗ್ ವೇಳೆ ಸ್ಫೋಟ: ತಾಯಿ–ಮಗಳು ದುರ್ಮರಣ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 18:30 IST
Last Updated 29 ಮಾರ್ಚ್ 2019, 18:30 IST
ಸಮೀನಾ ಬಾನು ಮತ್ತು  ಆಯೀಷಾಬಾನು
ಸಮೀನಾ ಬಾನು ಮತ್ತು ಆಯೀಷಾಬಾನು   

ಬೆಂಗಳೂರು: ‘ರಣಂ’ ಕನ್ನಡ ಸಿನಿಮಾದ ಕ್ಲೈಮ್ಯಾಕ್ಸ್‌ ದೃಶ್ಯದ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡು ತಾಯಿ– ಮಗಳು ದುರ್ಮರಣಕ್ಕೀಡಾಗಿದ್ದಾರೆ.

ಯಲಹಂಕದ ನಿವಾಸಿ ಸಮೀನಾ ಬಾನು (28) ಹಾಗೂ ಅವರ ಕಿರಿಯ ಮಗಳು ಆಯೀಷಾ ಬಾನು (6) ಮೃತಪಟ್ಟವರು. ಅವಘಡದಲ್ಲಿ ಸಮೀನಾಬಾನು ಅವರ ಹಿರಿಯ ಮಗಳು ಜೈನಾಬಿಗೂ (8) ಗಾಯವಾಗಿದ್ದು, ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ತಬ್ರೇಜ್‌ ‌ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ನಟ ಚೇತನ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯವನ್ನು ಬಾಗಲೂರು ಬಳಿಯ ಕೆಐಎಡಿಬಿಯ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅನಾಹುತ ಸಂಭವಿಸಿದೆ’ ಎಂದು ಬಾಗಲೂರು ಪೊಲೀಸರು ಹೇಳಿದರು.

ADVERTISEMENT

‘ಕಾರು ಬೆನ್ನಟ್ಟುವ ಹಾಗೂ ಸ್ಫೋಟ ಮಾಡುವ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಕಾರು ಸ್ಫೋಟಿಸಲು ಸಿಲಿಂಡರ್‌ ಬಳಸಲಾಗಿತ್ತು. ಆ ಸಿಲಿಂಡರ್‌ ಹಾರಿ ಹೋಗಿ ಶೂಟಿಂಗ್‌ ನೋಡುತ್ತಿದ್ದವರ ಬಳಿ ಬಿದ್ದು ಸ್ಫೋಟಗೊಂಡಿತು. ಆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದರು.

‘ಮೃತ ಸಮೀನಾ ಬಾನು, ಪತಿ ತಬ್ರೇಜ್‌ ಹಾಗೂ ಮಕ್ಕಳ ಜೊತೆ ಸೂಲಿಬೆಲೆಯಲ್ಲಿರುವ ತವರು ಮನೆಗೆ ಹೊರಟಿದ್ದರು. ಶೂಟಿಂಗ್‌ ನೋಡಲು ಇಡೀ ಕುಟುಂಬ ರಸ್ತೆಯ ಪಕ್ಕ ನಿಂತಿತ್ತು. ಅದೇ ವೇಳೆ ಸಿಲಿಂಡರ್‌ ಸ್ಫೋಟಗೊಂಡಿದ್ದರಿಂದ ತಾಯಿ– ಮಗಳು ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದರು.

‘ಸ್ಫೋಟದ ತೀವ್ರತೆ ಹೆಚ್ಚಾಗಿತ್ತು. ಸಮೀನಾ ಬಾನು ಹಾಗೂ ಆಯೀಷಾ ಬಾನು ದೇಹಗಳು ಛಿದ್ರವಾಗಿ ಬಿದ್ದಿದ್ದವು. ಸ್ಥಳೀಯರೇ ದೇಹದ ಭಾಗಗಳನ್ನು ಒಂದೆಡೆ ಸೇರಿಸಿ ಬಟ್ಟೆಯಿಂದ ಮುಚ್ಚಿದ್ದರು. ವಾಹನಗಳೂ ಜಖಂಗೊಂಡಿವೆ’ ಎಂದು ವಿವರಿಸಿದರು.

‘ಅವಘಡ ಸಂಭವಿಸುತ್ತಿದ್ದಂತೆ ಜೋರಾದ ಶಬ್ದ ಕೇಳಿಸಿತ್ತು. ಚಿತ್ರತಂಡದ ಸದಸ್ಯರು ಸ್ಥಳದಿಂದ ಪರಾರಿಯಾದರು’ ಎಂದು ಪ್ರತ್ಯಕ್ಷದರ್ಶಿ
ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೂಟಿಂಗ್‌ಗೆ ಪರವಾನಗಿ ಇತ್ತಾ?‌

‘ಕೆಐಎಡಿಬಿಯ ಕೈಗಾರಿಕಾ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಕೈಗಾರಿಕೆಗಳಿದ್ದು, ಇಂಥ ಜಾಗದಲ್ಲಿ ಸಿಲಿಂಡರ್ ಸ್ಫೋಟಿಸಿ ಚಿತ್ರೀಕರಣ ಮಾಡಲು ಚಿತ್ರತಂಡ ಪರವಾನಗಿ ಪಡೆದಿತ್ತಾ? ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಆರ್‌.ಎಸ್‌.ಪ್ರೊಡಕ್ಷನ್‌ ಅಡಿ ನಿರ್ದೇಶಕ ವಿ.ಸಮುದ್ರ ಈ ಸಿನಿಮಾ ನಿರ್ಮಿಸುತ್ತಿದ್ದರು. ಆರ್‌.ಶ್ರೀನಿವಾಸ್, ನಿರ್ಮಾಪಕ ಹಾಗೂ ವಿಜಯನ್‌ ಸಾಹಸ ನಿರ್ದೇಶಕರಾಗಿದ್ದರು. ಅವರೆಲ್ಲ ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.