ADVERTISEMENT

430 ಶಿಕ್ಷಕರ ನೇಮಕ: ಆರ್ಥಿಕ ಇಲಾಖೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 16:30 IST
Last Updated 28 ಫೆಬ್ರುವರಿ 2021, 16:30 IST

ಬೆಂಗಳೂರು: 2015ರ ಡಿಸೆಂಬರ್‌ 31ಕ್ಕೆ ನಿವೃತ್ತಿ, ಮರಣ, ರಾಜೀನಾಮೆ ಮತ್ತಿತರ ಕಾರಣಗಳಿಂದ ಖಾಲಿಯಾಗಿದ್ದ ಅನುದಾನಿತ ಪದವಿಪೂರ್ವ ಕಾಲೇಜುಗಳ 173 ಉಪನ್ಯಾಸಕರು ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 257 ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

ಅನುದಾನಿತ ಪದವಿಪೂರ್ವ ಕಾಲೇಜುಗಳ 173 ಉಪನ್ಯಾಸಕರ ಹುದ್ದೆ ಭರ್ತಿಯ ಪ್ರಸ್ತಾವವನ್ನು ಹಿಂದೆಯೇ ಅನುಮೋದಿಸಲಾಗಿತ್ತು. ನೇಮಕಾತಿ ಪ್ರಕ್ರಿಯೆಯೂ ಆರಂಭವಾಗಿತ್ತು. ಆದರೆ, ಇಲಾಖೆಯ ಹಂತದಲ್ಲೇ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಾಗಿದ್ದ 257 ಶಿಕ್ಷಕರ ಹುದ್ದೆಗಳ ಭರ್ತಿಗೂ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಹಣಕಾಸು ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಪುನಃ ಈ ಎರಡೂ ಪ್ರಕರಣಗಳಲ್ಲಿ ನೇಮಕಾತಿಗೆ ಅನುಮತಿ ಕೋರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಮುಖ್ಯಮಂತ್ರಿಯವರು ಅದನ್ನು ಅನುಮೋದಿಸಿದ್ದರು.

ADVERTISEMENT

173 ಉಪನ್ಯಾಸಕರು ಮತ್ತು 257 ಶಿಕ್ಷಕರ ಹುದ್ದೆಗಳ ಭರ್ತಿಗೆ ಫೆಬ್ರುವರಿ 23ರಂದು ಒಪ್ಪಿಗೆ ನೀಡಿರುವ ಆರ್ಥಿಕ ಇಲಾಖೆ, 2021–22ನೇ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ (ಜೂನ್‌ ಅಥವಾ ಜುಲೈ) ನೇಮಕಾತಿ ಆದೇಶ ನೀಡುವಂತೆ ಷರತ್ತು ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.