ಸಿದ್ದರಾಮಯ್ಯ
ಬೆಂಗಳೂರು: ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೈಕ್ರೊ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ಪರಿಹಾರ ನೀಡುವ ಯಾವುದೇ ಯೋಜನೆ ಜಾರಿಯಲ್ಲಿಲ್ಲ. ಆದರೆ, ಬೆಳೆ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಾಗ ನೀಡುವ ಪರಿಹಾರದಂತೆ ಇದನ್ನೂ ಮಾನವೀಯತೆಯಿಂದ ಪರಿಗಣಿಸಲಾಗುತ್ತದೆ’ ಎಂದರು.
‘2023–24ರಲ್ಲಿ ಆರು ಪ್ರಕರಣಗಳು ದಾಖಲಾಗಿ, ಎಂಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2024–25ರಲ್ಲಿ 27 ಪ್ರಕರಣಗಳಲ್ಲಿ ಆರು ಆತ್ಮಹತ್ಯೆ, 2025–26ರಲ್ಲಿ ಈವರೆಗೆ 105 ಪ್ರಕರಣಗಳಲ್ಲಿ 24 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಗಾರರ ಕಿರುಕುಳ ತಪ್ಪಿಸಲು ಫೆಬ್ರುವರಿಯಲ್ಲಿ ಕಾಯ್ದೆ ಜಾರಿಗೆ ತಂದ ಮೇಲೆ ಪ್ರಕರಣಗಳು ಹಾಗೂ ಆತ್ಮಹತ್ಯೆಗಳು ಕಡಿಮೆಯಾಗಿವೆ’ ಎಂದು ಮಾಹಿತಿ ನೀಡಿದರು.
‘2025ರ ಮಾರ್ಚ್‌ನಲ್ಲಿ 22 ಪ್ರಕರಣಗಳಲ್ಲಿ ಆರು ಮಂದಿ, ಏಪ್ರಿಲ್‌ನಲ್ಲಿ 10 ಪ್ರಕರಣಗಳಲ್ಲಿ ಇಬ್ಬರು, ಮೇನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಜೂನ್‌ನಲ್ಲಿ ಒಂದು ಪ್ರಕರಣದಲ್ಲಿ ಒಬ್ಬರು, ಜುಲೈನಲ್ಲಿ ಐದು ಪ್ರಕರಣಗಳಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅಂಕಿ–ಅಂಶ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.