ADVERTISEMENT

ಗೋಡಂಬಿಗೂ ಹಿಂಜರಿತದ ಬಿಸಿ; ಕುಸಿದ ಖರೀದಿ ಸಾಮರ್ಥ್ಯ

ಸಾಲದ ಸುಳಿಯಲ್ಲಿ ಗೋಡಂಬಿ ಸಂಸ್ಕರಣಾ ಕಾರ್ಖಾನೆಗಳು

ಬಾಲಚಂದ್ರ ಎಚ್.
Published 3 ಸೆಪ್ಟೆಂಬರ್ 2019, 8:48 IST
Last Updated 3 ಸೆಪ್ಟೆಂಬರ್ 2019, 8:48 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಉಡುಪಿ: ಆರ್ಥಿಕ ಹಿಂಜರಿತದ ಬಿಸಿ ಗೋಡಂಬಿ ಉದ್ಯಮಕ್ಕೂ ತಟ್ಟಿದೆ. ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಯ ಉತ್ಸಾಹ ಕುಂದಿದ್ದು, ಗೋಡಂಬಿ ಸಂಸ್ಕರಣಾ ಕಾರ್ಖಾನೆಗಳು ಸಂಕಷ್ಟದ ಸುಳಿಗೆ ಸಿಲುಕಿವೆ. ನಷ್ಟ ಭರಿಸಲಾಗದೆ ಕಾರ್ಖಾನೆಗಳು ಬಾಗಿಲು ಮುಚ್ಚುತ್ತಿವೆ.

ಗ್ರಾಹಕರ ನಿರಾಸಕ್ತಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 250 ಗೋಡಂಬಿ ಸಂಸ್ಕರಣಾ ಘಟಕಗಳಿವೆ. ವಾರ್ಷಿಕವಾಗಿ 2 ಲಕ್ಷ ಟನ್‌ ಗೋಡಂಬಿ ಉತ್ಪಾದನೆ ಆಗುತ್ತಿದೆ. ₹2,500 ಕೋಟಿ ವಹಿವಾಟು ನಡೆಯುತ್ತದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಉದ್ಯಮ ಅವಲಂಬಿಸಿದ್ದಾರೆ.

‘ನಿಧಾನಗತಿಯ ಆರ್ಥಿಕತೆಯಿಂದ ಮಾರುಕಟ್ಟೆಯಲ್ಲಿ ಗೋಡಂಬಿ ಖರೀದಿಗೆ ಗ್ರಾಹಕರ ನಿರಾಸಕ್ತಿ ಕಾಣುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಸುಬ್ರಾಯ ಪೈ ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಹಿಂದೆ, ಒಂದು ಕೆ.ಜಿ ಗೋಡಂಬಿ ಖರೀದಿಸುತ್ತಿದ್ದ ಗ್ರಾಹಕರು ಈಗ ಅರ್ಧ ಕೆ.ಜಿ ಮಾತ್ರ ಖರೀದಿಸುವ ಸ್ಥಿತಿ ಎದುರಾಗಿದೆ. ಉಡುಗೊರೆ ರೂಪದಲ್ಲಿ ಕೊಡಲಾಗುತ್ತಿದ್ದ ಗೋಡಂಬಿ ಪ್ರಮಾಣ ಕುಸಿದಿದೆ. ಒಟ್ಟಾರೆ ಖರೀದಿಯ ಧಾರಣ ಸಾಮರ್ಥ್ಯ ಪಾತಾಳ ಕಂಡಿದೆ ಎಂದು ಉದ್ಯಮದ ಸಂಕಷ್ಟವನ್ನು ಅವರು ವಿವರಿಸಿದರು.

ಕೇರಳದಲ್ಲಿ 600 ಘಟಕ ಬಂದ್‌: ಕೇರಳದ ಕೊಲ್ಲಂನಲ್ಲಿದ್ದ 900 ಗೋಡಂಬಿ ಕಾರ್ಖಾನೆಗಳಲ್ಲಿ 600 ಸ್ಥಗಿತವಾಗಿದ್ದು, 300 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 25 ರಿಂದ 30 ಕಾರ್ಖಾನೆಗಳು ಮುಚ್ಚಿರುವ ಮಾಹಿತಿ ಇದೆ ಎಂದರು.

ಬಂಡವಾಳ ಕೊರತೆ: ರಾಜ್ಯದಲ್ಲಿ ಬೇಡಿಕೆಯಷ್ಟು ಗೋಡಂಬಿ ಬೆಳೆಯಲಾಗುತ್ತಿಲ್ಲ. ರಾಜ್ಯದಿಂದ 30 ಸಾವಿರ ಟನ್‌ ಪೂರೈಕೆಯಾದರೆ, ಉಳಿದ1.70 ಲಕ್ಷ ಟನ್‌ ಕಚ್ಚಾ ಮಾಲನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈ ಉದ್ಯಮಕ್ಕೆ ಬಂಡವಾಳದ ಹರಿವು ನಿರಂತರವಾಗಿರಬೇಕು. ಆದರೆ, ಈಚೆಗೆ ಬ್ಯಾಂಕ್‌ಗಳಲ್ಲಿ ಎನ್‌ಪಿಎಸ್‌ (ಅನುತ್ಪಾದಕ ಸಾಲ) ಪ್ರಮಾಣ ಹೆಚ್ಚಾಗಿರುವುದರಿಂದ, ಸಾಲ ನೀಡಿಕೆ ನಿಯಮಗಳು ಬಿಗಿಯಾಗಿದ್ದು, ಸಮಯಕ್ಕೆ ಸರಿಯಾಗಿ ಸಾಲ ಸಿಗುತ್ತಿಲ್ಲ ಎಂದು ಸಮಸ್ಯೆ ವಿವರಿಸಿದರು.

ಪರಿಣಾಮ ಕಾರ್ಖಾನೆ ಮಾಲೀಕರ ಖರೀದಿ ಸಾಮರ್ಥ್ಯ ಕುಸಿದಿದೆ. ಜತೆಗೆ ಬೇಡಿಕೆ ಕೂಡ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಸಂಗ್ರಹಿಸಲು ಮಾಲೀಕರು ಹೆದರುವಂತಾಗಿದೆ ಎಂದು ತಿಳಿಸಿದರು.

ಚೇತರಿಕೆಗೆ ಕ್ರಮ ಅಗತ್ಯ: ಗೋಡಂಬಿ ಉದ್ಯಮ ಚೇತರಿಕೆಗೆ ಬಂಡವಾಳದ ಹರಿವು ಹೆಚ್ಚಾಗಬೇಕು. ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಸಿಗಬೇಕು. ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗಿ, ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಾದರೆ ಉದ್ಯಮ ಸಂಕಷ್ಟದಿಂದ ಪಾರಾಗಲಿದೆ ಎಂದರು.

ಹೆಚ್ಚಿನ ಸುಂಕ ವಸೂಲಿ

ವಿದೇಶಗಳಿಂದ ಆಮದಾಗುವ ಕಚ್ಚಾ ಗೇರು ಬೀಜಕ್ಕೆ ಮಂಗಳೂರು ಬಂದರನಲ್ಲಿ ಹೆಚ್ಚಿನ ಸುಂಕ ವಿಧಿಸಲಾಗುತ್ತಿದೆ. ದೇಶದ ಯಾವುದೇ ಕಡೆಗಳಲ್ಲಿ ಇರದಷ್ಟು ಸುಂಕ ಇಲ್ಲಿ ಪಾವತಿಸಬೇಕು. ಆಮದು ಮೌಲ್ಯದ ಮೇಲೆ ತೆರಿಗೆ ಹಾಕದೆ, ಮೌಲ್ಯದ ಪ್ರಮಾಣವನ್ನು ಹೆಚ್ಚಿಸಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ಗೋಡಂಬಿ ಕಾರ್ಖಾನೆ ಮಾಲೀಕರಿಗೆ ಹಾಗೂ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ ಎಂದುಸುಬ್ರಾಯ ಪೈ ತಿಳಿಸಿದರು.

**

ಆರ್ಥಿಕ ಹಿಂಜರಿತ ಜನ ಏನಂತಾರೆ?

ಸುಧಾರಣೆಗೆ ಹೊಸ ನೀತಿ ಅಗತ್ಯ

ಪ್ರಯೋಗಾತ್ಮಕ ಆರ್ಥಿಕ ನೀತಿಯ ಪರಿಣಾಮ ದೇಶ ಕುಗ್ಗಿದೆ. ಕೂಡಲೇ ಎಚ್ಚೆತ್ತು ಹೊಸ ಆರ್ಥಿಕ ನೀತಿಗಳನ್ನು ಅನುಷ್ಠಾನ ಮಾಡದಿದ್ದರೆ ದೇಶವೇ ಅಂತ್ಯ ಕಾಣಲಿದೆ. ಮುಂದೊಂದು ದಿನ ಭಾರತ ಹೇಗಿದೆ ಎಂದು ಬೆರಗಾಗಿ ನೋಡಬೇಕಾದವರು ಹೀಗಿತ್ತಾ ಎಂದು ನೆನಪು ಮಾಡಿಕೊಳ್ಳುವ ಸ್ಥಿತಿಗೆ ತಲುಪದಿರಲಿ.

ಅವಿನಾಶ್‌ ರೆಡ್ಡಿ, ಕಲಬುರ್ಗಿ

**

ಸಮತೋಲನವಾಗಿಲ್ಲ

ದೇಶದ ಜನಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ ಅದಕ್ಕೆ ಸಮಾನವಾಗಿ ಬೇಕಿದ್ದ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಇದರಿಂದ ಆರ್ಥಿಕತೆ ಕುಸಿಯುತ್ತಿದೆ. ಜನಸಂಖ್ಯೆ ಮಾತ್ರ ಏರಿಕೆಯಾಗುತ್ತದೆಯೇ ಹೊರತು ದೇಶದ ಆರ್ಥಿಕತೆಯಲ್ಲ.

- ಆರ್.ಮಂಜುನಾಥ್, ಸಕಲೇಶಪುರ

**

ಕೃಷಿಯತ್ತ ಗಮನ ಹರಿಸಿ

ನಮ್ಮದು ಕೃಷಿ ಪ್ರಧಾನ ದೇಶ. ಹೀಗೆ ಬಂದು ಹಾಗೆ ಹೋಗುತ್ತಿರುವ ಕೈಗಾರಿಕೆಗಳಿಗಿಂತ ಎಂದೂ ವಂಚಿಸದ ಕೃಷಿಯನ್ನು ನಂಬುವುದು ಲೇಸು. ಕೈಗಾರಿಕೆ ಪ್ರೋತ್ಸಾಹಿಸಿದ ಸರ್ಕಾರಗಳು ಕೃಷಿಗೆ ಆದ್ಯತೆ ನೀಡಿದ್ದರೆ ಇಂದು ರೈತರು ಪ್ರಜ್ವಲಿಸುತ್ತಿದ್ದರು.
- ವಿರಾಜ್, ಕಾಸರಗೋಡು

**

ಸಹಿಸಲೇಬೇಕು

ಈ ಹಿಂದೆ ದೇಶವನ್ನು ವಿದೇಶಿ ಸಾಲಗಳಿಂದ ಸದೃಢವಾಗಿದೆ ಎಂದು ನಂಬಿಸುತ್ತಿದ್ದರು. ಈಗ ವಾಸ್ತವದ ಅಂಶ ಎಲ್ಲರಿಗೂ ಬಹಿರಂಗವಾಗುತ್ತಿದೆ. ದೇಶದಲ್ಲಿ ಕಪ್ಪುಹಣದಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಆರ್ಥಿಕತೆಯಲ್ಲಿ ಬದಲಾವಣೆಗಾಗಿ ಆರ್ಥಿಕ ಹಿಂಜರಿತ ಎದುರಿಸಲೇ‌ಬೇಕು

- ಆರ್.ಗಣೇಶ್‌, ಬಾಗೇಪಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.