ಶಾಲೆ
(ಸಾಂಕೇತಿಕ ಚಿತ್ರ)
ಬೆಂಗಳೂರು: ಕುಮಾರಪಾರ್ಕ್ ಬಡಾವಣೆಯ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುತ್ತಾರೆ ಎಂಬ ಅಂಶ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ದೃಢಪಟ್ಟಿದೆ.
ಕೇಂದ್ರ ಪಠ್ಯಕ್ರಮ ಅನುಸರಿಸುವ (ಸಿಬಿಎಸ್‌ಇ) ಈ ಶಾಲೆಯಲ್ಲಿ ನಿತ್ಯವೂ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲೇ ಸಂಭಾಷಣೆ ನಡೆಸಬೇಕು. ಶಾಲಾ ಅವಧಿಯಲ್ಲಿ ಯಾವುದೇ ವಿದ್ಯಾರ್ಥಿ ಕನ್ನಡ ಸೇರಿದಂತೆ ತಮ್ಮ ಮಾತೃಬಾಷೆ ಬಳಸಿದರೆ ಅವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಹಲವು ಪೋಷಕರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಪರಿಶೀಲನೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ, ದಂಡ ವಿಧಿಸುತ್ತಿರುವ ಅಂಶವನ್ನು ಖಚಿತಪಡಿಸಿದೆ.
‘ಶಾಲಾ ಅವಧಿಯಲ್ಲಿ ಕನ್ನಡದಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುತ್ತಿರುವುದು ಅಧಿಕಾರಿಗಳ ಭೇಟಿ ವೇಳೆ ದೃಢಪಟ್ಟಿದೆ. ಹಲವು ವಿದ್ಯಾರ್ಥಿಗಳು ಈ ಕುರಿತು ಲಿಖಿತವಾಗಿ ಖಚಿತಪಡಿಸಿದ್ದಾರೆ. ಕನ್ನಡ ಮಾತನಾಡಿದಕ್ಕಾಗಿ ದಂಡ ವಿಧಿಸುವುದು ಅಭಿವ್ಯಕ್ತಿಯ ಸ್ವಾತಂತ್ರ್ಯದ ಹರಣವೂ ಆಗಿದೆ. ಹಾಗಾಗಿ, ಶಾಲೆಗೆ ನೀಡಿರುವ ನಿರಾಕ್ಷೇಪಣ ಪತ್ರವನ್ನು (ಎನ್‌ಒಸಿ) ತಕ್ಷಣ ಹಿಂಪಡೆಯಬೇಕು’ ಎಂದು ಬಿಳಿಮಲೆ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.