ADVERTISEMENT

ಯುವರಾಜಸ್ವಾಮಿಗೆ ಲಂಚ: ಮೂವರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 7:50 IST
Last Updated 16 ನವೆಂಬರ್ 2021, 7:50 IST
ಯುವರಾಜಸ್ವಾಮಿ
ಯುವರಾಜಸ್ವಾಮಿ   

ಬೆಂಗಳೂರು: ಬಿಜೆಪಿ ನಾಯಕರ ನಿಕಟವರ್ತಿ ಎಂದು ಗುರುತಿಸಿಕೊಂಡು ವಂಚಿಸುತ್ತಿದ್ದ ನಾಗರಭಾವಿಯ ಯುವರಾಜ ಸ್ವಾಮಿ ಅಲಿಯಾಸ್‌ ಸ್ವಾಮಿಗೆ ಸರ್ಕಾರದ ವಿವಿಧ ಹುದ್ದೆಗಳನ್ನು ಪಡೆಯುವುದಕ್ಕಾಗಿ ಲಂಚ ನೀಡಿದ್ದ ಆರೋಪದ ಮೇಲೆ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್‌ ದಾಖಲಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಅಧ್ಯಕ್ಷ ಹುದ್ದೆ ಪಡೆಯಲು ₹ 1 ಕೋಟಿ ನೀಡಿದ್ದ ಆರೋಪದ ಮೇಲೆ ಎಚ್‌.ಎಸ್‌.ಆರ್‌. ಬಡಾವಣೆ ನಿವಾಸಿ ಸುಧೀಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅದೇ ರೀತಿ, ಅಳಿಯನಿಗೆ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದಲ್ಲಿ (ಕೆಎಂಎಫ್‌) ಹುದ್ದೆ ಪಡೆಯಲು ₹ 30 ಲಕ್ಷ ನೀಡಿದ್ದ ಕಮಲಾನಗರ ನಿವಾಸಿ ಗೋವಿಂದಯ್ಯ ಮತ್ತು ಮಗನಿಗೆ ಬಿಬಿಎಂಪಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆ ಪಡೆಯಲು ₹ 30 ಲಕ್ಷ ನೀಡಿದ್ದ ಆರೋಪದ ಮೇಲೆ ರಾಜಾಜಿನಗರ ನಿವಾಸಿ ಡಾ.ಜಿ. ನರಸಿಂಹಸ್ವಾಮಿ ವಿರುದ್ಧ ಎಸಿಬಿ ಪ್ರಕರಣಗಳನ್ನು ದಾಖಲಿಸಿದೆ.

ADVERTISEMENT

ಯುವರಾಜ ಸ್ವಾಮಿ ಹಣ ಪಡೆದು ವಂಚಿಸಿರುವುದಾಗಿ ಈ ಮೂವರೂ ಜ್ಞಾನಭಾರತಿ, ಅನ್ನಪೂರ್ಣೇಶ್ವರಿನಗರ ಮತ್ತು ಸೈಬರ್‌ ಅಪರಾಧ ಪೊಲೀಸ್‌ ಠಾಣೆಗಳಿಗೆ ದೂರು ನೀಡಿದ್ದರು. ಅಲ್ಲಿನ ಪೊಲೀಸರು ತನಿಖೆ ನಡೆಸಿ ಯುವರಾಜ ಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ ಸಹ ಅಧ್ಯಕ್ಷ ಆದರ್ಶ್‌ ಆರ್‌. ಅಯ್ಯರ್‌ ಅಕ್ಟೋಬರ್‌ 8ರಂದು ಎಸಿಬಿಗೆ ದೂರು ನೀಡಿದ್ದರು. ಲಂಚ ನೀಡಿರುವ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕೋರಿದ್ದರು. ನವೆಂಬರ್‌ 8ರಂದು ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

'ಯುವರಾಜ ಸ್ವಾಮಿಗೆ ಲಂಚ ನೀಡಿದ್ದ ಆರೋಪದ ಮೇಲೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎಸ್‌. ಇಂದ್ರಕಲಾ ಮತ್ತು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡ ಎಂದು ಗುರುತಿಸಿಕೊಂಡಿರುವ ವಿನಿತ್‌ ಕುಮಾರ್‌ ಎಂ.ಸಿ. ಎಂಬುವವರ ವಿರುದ್ಧವೂ ಎಸಿಬಿಗೆ ದೂರು ನೀಡಲಾಗಿತ್ತು. ಅವರ ವಿರುದ್ಧ ಇನ್ನೂ ಯಾವುದೇ ಕ್ರಮ ಜರುಗಿಸಿಲ್ಲʼ ಎಂದು ಆದರ್ಶ್‌ ಅಯ್ಯರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.