ADVERTISEMENT

ಅಬಕಾರಿ ಇಲಾಖೆ ಸಿಬ್ಬಂದಿ ಬೀದಿ ಜಗಳ: ಇನ್‌ಸ್ಪೆಕ್ಟರ್‌ ನಟರಾಜ್‌ ಮೇಲೆ ಎಫ್‌ಐಆರ್‌

ಬೀದಿ ಜಗಳ ಪ್ರಕರಣ: ಚಾಲಕ ಮನೋಹರ್‌, ಅಬಕಾರಿ ರಕ್ಷಕರಾದ ವೀರೇಶ್‌, ಕಾಂತರಾಜ್‌ ವಿರುದ್ಧವೂ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 12:21 IST
Last Updated 16 ಏಪ್ರಿಲ್ 2020, 12:21 IST
   

ಮಡಿಕೇರಿ/ ಶನಿವಾರಸಂತೆ: ಅಕ್ರಮ ಮದ್ಯ ಮಾರಾಟ ಪ್ರಕರಣ ಸಂಬಂಧ ಪರಿಶೀಲನೆಗೆ ತೆರಳಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳ ಮೇಲೆಯೇ ಅದೆ ಇಲಾಖೆಯ ಸಿಬ್ಬಂದಿಗಳು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಮೇಲೆ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಗುರುವಾರ ಎಫ್‌ಐಆರ್‌ ದಾಖಲಾಗಿದೆ.

ಅಬಕಾರಿ ಇನ್‌ಸ್ಪೆಕ್ಟರ್‌ ಎಂ.ನಟರಾಜ್‌, ಅವರ ಜೀಪು ಚಾಲಕ ಮನೋಹರ್‌, ಅಬಕಾರಿ ರಕ್ಷಕರಾದ ವೀರೇಶ್‌ ಹಾಗೂ ಕಾಂತರಾಜ್‌ ಮೇಲೆ ದೂರು ದಾಖಲಾಗಿದೆ.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಸ್ಐ ಕೃಷ್ಣನಾಯಕ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನೊಟೀಸ್ ಜಾರಿ ನೀಡಲಾಗಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

‘ಆಲೂರು ಸಿದ್ದಾಪುರ ಗ್ರಾಮದ ವೈಭವ್‌ ವೈನ್ಸ್ ಎದುರು ಬುಧವಾರ ಸಂಜೆ ನನ್ನ ಹಾಗೂ ಚಾಲಕ ಭುವನೇಶ್ವರ್‌ ಮೇಲೆ ನಟರಾಜ್‌ ಮತ್ತಿತರರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು’ ಎಂದು ಆರೋಪಿಸಿ ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಚ್‌.ಎಸ್‌.ಶಿವಪ್ಪ ದೂರು ನೀಡಿದ್ದಾರೆ.

ಸರ್ಕಾರಿ ಇಲಾಖೆಯ ಅಧಿಕಾರಿಗಳೇ ಪರಿಶೀಲನೆ ವೇಳೆ ಹೊಡೆದಾಟ ಮಾಡಿದ್ದಕೊಂಡಿದ್ದ ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜುಂಡಯ್ಯ, ಪಿಎಸ್ಐ ಕೃಷ್ಣನಾಯಕ್, ಎಎಸ್ಐಗಳಾದ ಗೋವಿಂದ್, ಶಿವಲಿಂಗ, ಹೆಡ್ ಕಾನ್‌ಸ್ಟೆಬಲ್‌ ಬೋಪಣ್ಣ, ಸಿಬ್ಬಂದಿ ಶಫೀರ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಪ್ರಕರಣ ಏನು?: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮದ ವೈಭವ್‌ ವೈನ್ಸ್‌ಗೆ ಬೀಗ ಹಾಕಲಾಗಿತ್ತು. ಆದರೂ, ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರಿಂದ ಉಪ ಆಯುಕ್ತೆ ಪಿ.ಬಿಂದುಶ್ರೀ ಅವರಿಗೆ ದೂರು ಬಂದಿತ್ತು. ದೂರು ಬಂದ ಹಿನ್ನೆಲೆಯಲ್ಲಿ ದಾಸ್ತಾನು ಪರಿಶೀಲನೆ ನಡೆಸುವಂತೆ ಉಪ ಅಧೀಕ್ಷಕ ಶಿವಪ್ಪಗೆ ಆಯುಕ್ತರು ಸೂಚಿಸಿದ್ದರು. ಸೂಚನೆಯ ಮೇರೆಗೆ ಬುಧವಾರ ಸಂಜೆ ವೈಭವ್‌ ವೈನ್ಸ್‌ಗೆ ಪರಿಶೀಲನೆ ತೆರಳಿದ್ದಾಗ ಹಾದಿ ರಂಪಾಟ, ಬೀದಿ ಜಂಗಳ ನಡೆದಿತ್ತು. ಈ ವಿಡಿಯೊ ವೈರಲ್‌ ಆಗಿದೆ.

‘ಮಾಲೀಕರಾದ ಎಚ್.ಇ.ತಮ್ಮಯ್ಯ ಅವರನ್ನು ದಾಸ್ತಾನು ಪರಿಶೀಲನೆಗೆ ಕೀ ಕೇಳಿದಾಗ ನಟರಾಜ್ ಕೊಂಡೊಯ್ದಿದ್ದಾರೆಂದು ತಿಳಿಸಿದರು. ತಾವೇ ಹೋಗಿ ಕೀ ಪಡೆದು ಬಂದು ಕರ್ತವ್ಯಕ್ಕೆ ಅವಕಾಶ ನೀಡುವಂತೆ ಸೂಚನೆ ನೀಡಲಾಯಿತು. ನಟರಾಜ್‌ ಅವರು ಫೋನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದರು. ಆ ಮಾಹಿತಿಯನ್ನು ಆಯುಕ್ತರಿಗೆ ತಿಳಿಸಲಾಯಿತು. ಸ್ಥಳದಲ್ಲೇ ಕಾಯುತ್ತಿರುವಾಗ, ಬೆಳಿಗ್ಗೆಯೇ ಪಾಳಿಯ ತಮ್ಮ ಕರ್ತವ್ಯ ಮುಗಿಸಿದ್ದರೂ ಸಂಜೆ 6.10ಕ್ಕೆ ಮಪ್ತಿಯಲ್ಲಿ ಬಂದ ಸೋಮವಾರಪೇಟೆ ಅಬಕಾರಿ ನಿರೀಕ್ಷಕ ಎಂ.ನಟರಾಜ್‌ ಅವರು ನನ್ನ ಜೀಪು ಚಾಲಕ ಭುವನೇಶ್ವರ್‌ಗೆ ಲಾಠಿಯಿಂದ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದರು. ತಪಾಸಣೆ ಮಾಡಲು ಹೇಳಿದವರು ಯಾರೋ ಎಂದು ನಿಂದಿಸಿದರು. ಆಗ ಬಿಡಿಸಲು ಹೋದ ನನ್ನ ಮೇಲೂ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹಿರಿಯ ಅಧಿಕಾರಿ ಎಂಬುದನ್ನು ಲೆಕ್ಕಿಸಿದೆ ನಿಂದನೆ ಮಾಡಿದ್ದಾರೆ. ನಾನು ಹಾಗೂ ಭುವನೇಶ್ವರ್‌ ಹಲ್ಲೆಯಿಂದ ಗಾಯಗೊಂಡಿದ್ದೇವೆ‘ ಎಂದು ಶಿವಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಮಾನತಿಗೆ ಆಗ್ರಹ: ಘಟನೆಯ ಪೂರ್ಣ ತನಿಖೆ ಆಗಬೇಕು. ಯಾವ ಕಾರಣಕ್ಕೆ ಈ ಘಟನೆ ನಡೆದಿದೆ. ಪರಿಶೀಲನೆಗೆ ತೆರಳಿದ್ದ ಅಬಕಾರಿ ಇಲಾಖೆಯ ಅಧಿಕಾರಿಯ ಮೇಲೆಯೇ ಹಲ್ಲೆ ಮಾಡಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕು. ತಪ್ಪಿತಸ್ಥರನ್ನು ಅಮಾನತು ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಜನರು ಆಗ್ರಹಿಸಿದ್ದಾರೆ.

ಘಟನೆ ವರದಿ ಸಲ್ಲಿಕೆ: ಪಿ.ಬಿಂದುಶ್ರೀ
ಮಡಿಕೇರಿ: ‘ಗಲಾಟೆಯ ವಿಡಿಯೊ ಪರಿಶೀಲನೆ ನಡೆಸಲಾಗಿದೆ. ಇಡೀ ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ವಿವರವಾದ ವರದಿ ಸಲ್ಲಿಕೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಮೇಲಧಿಕಾರಿಗಳೇ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತೆ ಪಿ.ಬಿಂದುಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.