ADVERTISEMENT

ಬಂಡೀಪುರ; 2,500 ಹೆಕ್ಟೇರ್ ಕಾಡು ನಾಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 19:52 IST
Last Updated 24 ಫೆಬ್ರುವರಿ 2019, 19:52 IST
ಬೆಂಕಿಗೆ ಆಹುತಿಯಾದ ಗೌರಿಕಲ್ಲುಬೆಟ್ಟ 
ಬೆಂಕಿಗೆ ಆಹುತಿಯಾದ ಗೌರಿಕಲ್ಲುಬೆಟ್ಟ    

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಉರಿಯುತ್ತಿದ್ದ ಬೆಂಕಿ ಬಂಡೀಪುರದ ಗಡಿ ದಾಟಿದೆ.

ಬೆಂಕಿ ತಡೆಯಲು ತಮಿಳುನಾಡು ಮತ್ತು ಕೇರಳದ ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕೌಂಟರ್ ಫೈರ್ (ಎದುರು ಬೆಂಕಿ ಹಾಕುವ) ಮೂಲಕ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಂಡೀಪುರಕ್ಕೆ ಭಾನುವಾರ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ಬಿದ್ದು, ಸುಮಾರು 2,500 ಹೆಕ್ಟೇರ್ ಸುಟ್ಟು ಹೋಗಿದೆ. ಹೊಸತಂತ್ರ ಅಳವಡಿಸಿಕೊಂಡು ಕಾಡು ರಕ್ಷಿಸಲು ಕ್ರಮ ವಹಿಸಲಾಗುವುದು’ ಎಂದು ಅವರು ಹೇಳಿದರು.

ಕರಕಲಾದ ಕಾಡು
ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಡು ಸುಟ್ಟು ಕರಕಲಾಗಿದೆ. ಹಕ್ಕಿಗಳ ಚಿಲಿಪಿಲಿ, ವನ್ಯಜೀವಿಗಳ ಸುಳಿದಾಟವಿಲ್ಲದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೀಗ ಸ್ಮಶಾನದಂತಾಗಿದೆ.

ಸತತ ಮೂರು ದಿನಗಳ ಕಾಳ್ಗಿಚ್ಚಿಗೆ ನಲುಗಿದ ಕಾಡು ಪ್ರಾಣಿಗಳು ದಿಕ್ಕೆಟ್ಟು ಓಡುವುದು ಒಂದೆಡೆಯಾದರೆ, ಬೆಂಕಿ ನಂದಿಸಲೇಬೇಕೆಂಬ ಪಣ ತೊಟ್ಟು ನಿಂತ ಇಲಾಖೆ ಸಿಬ್ಬಂದಿ ಮತ್ತೊಂದೆಡೆ. ಇಷ್ಟಾದರೂ ಮುಗಿಲೆತ್ತರಕ್ಕೆ ಹಬ್ಬಿದ ಜ್ವಾಲೆ ಬಂಡೀಪುರ ವಲಯ, ಕುಂದಕೆರೆ ವಲಯ ಸೇರಿ ಕೇರಳದ ವೈನಾಡು ಅರಣ್ಯವನ್ನೂ ಬಲಿ ಪಡೆದು ಕಣ್ಣು ಹಾಯಿಸಿದಷ್ಟು ಕಾಡು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.

ಬಂಡೀಪುರ ವಲಯದಲ್ಲಿ 2013ರಲ್ಲಿ ಬೆಂಕಿಗೆ ಅಪಾರ ಅರಣ್ಯ ನಾಶವಾಗಿತ್ತು. 2017ರಲ್ಲಿ ಕಾಡಂಚಿನ ಗ್ರಾಮ ಕಾರೆಮಾಳ ಭಾಗದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಸುಮಾರು 10 ಸಾವಿರ ಎಕರೆ ಕಾಡು ಭಸ್ಮವಾಗಿತ್ತು. ಅಲ್ಲದೆ, ಐನೋರ್ ಮಾರಿಗುಡಿ, ಕಲ್ಕೆರೆ ಭಾಗದಲ್ಲಿ ಬೆಂಕಿಬಿದ್ದು ಅರಣ್ಯ ಪ್ರದೇಶ ನಾಶವಾಗುವುದರ ಜೊತೆಗೆ ಇಲಾಖೆ ಸಿಬ್ಬಂದಿಯೊಬ್ಬರು ಬಲಿಯಾಗಿದ್ದರು.

2018ರಲ್ಲಿ ಬೇಸಿಗೆ ಆರಂಭಕ್ಕೂ ಮೊದಲೇ ಉತ್ತಮವಾಗಿ ಮಳೆಯಾಗಿತ್ತು. ಇದರಿಂದ ಶೂನ್ಯ ಬೆಂಕಿ ವಲಯ ಎಂದು ಘೋಷಿಸಲಾಗಿತ್ತು. ಆದರೂ ಈಗ ಬಿದ್ದಿರುವ ಕಾಳ್ಗಿಚ್ಚಿಗೆ ಸಾವಿರಾರು ಎಕರೆ ಆಹುತಿಯಾಗಿದೆ.

ಕಳೆದ ವರ್ಷ ಉತ್ತಮ ಮಳೆಯಾಗಿರುವುದರ ಜತೆಗೆ, ಬೆಂಕಿ ಬೀಳದೆ ಇದ್ದ ಕಾರಣ ಕಾಡಿನಲ್ಲಿ ಹುಲ್ಲು ಮತ್ತು ಲಂಟಾನ ಸಮೃದ್ಧಿಯಾಗಿ ಬೆಳೆದಿತ್ತು. ಆದರೆ, ಕಿಡಿಗೇಡಿಗಳು ಹಾಕಿದ ಬೆಂಕಿಗೆ ಸೆಕ್ಷನ್ 4ಗೆ ಸೇರಿದ ಭೂಮಿ, ಕಂದಾಯ ಭೂಮಿ, ಸಾಮಾಜಿಕ ಅರಣ್ಯ ಸೇರಿದಂತೆ ಸಂರಕ್ಷಿತ ಅರಣ್ಯವೂ ಸುಟ್ಟು ಹೋಗಿದೆ.

ಅರಣ್ಯ ಇಲಾಖೆ ನಾಟಿ ಮಾಡಿದ್ದ ಬಿದಿರು ಹುಲುಸಾಗಿ ಬೆಳೆದಿತ್ತು. ಅದೂ ಕಾಳ್ಗಿಚ್ಚಿಗೆ ಆಹುತಿಯಾಗಿದೆ ಎಂದು ಇಲಾಖೆ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಬೆಂಕಿಗೆ ಕಾಡು ಪ್ರಾಣಿಗಳ ದಾಳಿ?: ಎರಡು ತಿಂಗಳಿನಿಂದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಹುಲಿ, ಚಿರತೆಗಳು ಜಾನುವಾರುಗಳ ಮೇಲೆ ಸತತ ದಾಳಿ ನಡೆಸಿವೆ. ರೈತರ ಜಮೀನಿಗೆ ಕಾಡು ಪ್ರಾಣಿಗಳು ಆಗಾಗ್ಗೆ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಈ ಸಿಟ್ಟಿನಿಂದ ಕೆಲವರು ಬೆಂಕಿ ಇಟ್ಟಿರಬಹುದು ಎಂಬುದು ಪರಿಸರವಾದಿಗಳ ಆರೋಪ.

ಕರಿಘಟ್ಟ ಅರಣ್ಯಕ್ಕೆ ಬೆಂಕಿ
ಶ್ರೀರಂಗಪಟ್ಟಣ: ತಾಲ್ಲೂಕಿನ ಪುರಾಣ ಪ್ರಸಿದ್ಧ ಕರಿಘಟ್ಟ ಪ್ರಕೃತಿ ತಾಣದ ಪೂರ್ವ ಭಾಗದ ಅರಣ್ಯಕ್ಕೆ ಭಾನುವಾರ ಸಂಜೆ ಬೆಂಕಿ ಬಿದ್ದಿದೆ.

ನೂರಾರು ಎಕರೆ ಅರಣ್ಯಕ್ಕೆ ಅಲ್ಲಾಪಟ್ಟಣ ಕಡೆಯಿಂದ ಬೆಂಕಿ ವ್ಯಾಪಿಸಿದ್ದು, ಮರಗಳು ಬೆಂಕಿಗೆ ಆಹುತಿಯಾಗಿವೆ. ಕುರುಚಲು ಕಾಡಿನ ಭಾಗ ಸುಟ್ಟು ಹೋಗಿದೆ. ಚಿನ್ನಾಯಕನಹಳ್ಳಿ ಭಾಗಕ್ಕೂ ಬೆಂಕಿ ಹರಡುತ್ತಿದ್ದು, ಅರಣ್ಯದ ಅಂಚಿನಲ್ಲಿರುವ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ.

‘ಮಕ್ಕಳಾಗದವರು ಹರಕೆ ಹೊತ್ತುಕೊಂಡು, ಹರಕೆ ತೀರಿಸಲು ಅರಣ್ಯಕ್ಕೆ ಬೆಂಕಿ ಹಚ್ಚುವ ರೂಢಿ ಹಲವು ದಶಕಗಳಿಂದ ನಡೆಯುತ್ತಿದೆ’ ಎಂದು ಸ್ಥಳೀಯರು ದೂರಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಬಿಬಿ ಕಾವಲು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬಿಬಿ ಕಾವಲು ಪ್ರದೇಶ ವ್ಯಾಪ್ತಿಯ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಕರಿಘಟ್ಟ ಅರಣ್ಯಕ್ಕೆ ಭಾನುವಾರ ಸಂಜೆ ಬೆಂಕಿ ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.