ADVERTISEMENT

ಮೀನಿನ ಚಿಪ್ಸ್‌ ಶೀಘ್ರದಲ್ಲೇ ಮಾರುಕಟ್ಟೆಗೆ

ಕೆಎಫ್‌ಡಿಸಿ–ಮತ್ಸ್ಯಬಂಧನ ಸಂಸ್ಥೆಯ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 19:15 IST
Last Updated 20 ಜೂನ್ 2020, 19:15 IST
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೀನಿನ ಚಿಪ್ಸ್‌ ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೀನಿನ ಚಿಪ್ಸ್‌ ಬಿಡುಗಡೆ ಮಾಡಿದರು.   

ಬೆಂಗಳೂರು: ಆಲೂಗಡ್ಡೆ, ಬಾಳೆಕಾಯಿ, ಹಲಸು ಸಹಿತ ಹಲವು ಬಗೆಯ ಚಿಪ್ಸ್‌ಗಳು ಮಾರುಕಟ್ಟೆಯಲ್ಲಿವೆ. ಇದೀಗ ಅವುಗಳ ಸಾಲಿಗೆ ಸೇರಲು ಸಜ್ಜಾಗಿದೆ ಮೀನಿನ ಚಿಪ್ಸ್‌.

ಸಮುದ್ರದ ಉಪ್ಪುನೀರು, ಒಳನಾಡಿನ ಸಿಹಿನೀರಿನಲ್ಲಿ ಬೆಳೆದ ಅಗ್ಗದ ದರದ ಆದರೆ ಪೌಷ್ಟಿಕವಾದ ರಾಣಿ ಮೀನು (ಮದಿಮಲ್‌), ಬೂತಾಯಿ ಮೀನುಗಳಿಂದ ಸಿದ್ಧಗೊಂಡ ಚಿಪ್ಸ್‌ ಅನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ತಯಾರಿಸಲು ಆರಂಭಿಸಿದ್ದು, ಶೀಘ್ರ ಮಾರುಕಟ್ಟೆಗೆ ಬರಲಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಪ್ಸ್‌ ಮತ್ತು ಇತರ ಉಪ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ.

ಮೀನಿನಲ್ಲಿ ಸಾಮಾನ್ಯವಾಗಿ ಕೊಬ್ಬಿನಂಶ ಬಹಳ ಕಡಿಮೆ ಇರುತ್ತದೆ. ಹೀಗೆ ಇರುವ ಕೊಬ್ಬನ್ನೂ ತೆಗೆದು ಮೀನಿನ ನೈಜ ಪೌಷ್ಟಿಕಾಂಶವನ್ನು ಕಾಪಾಡಿಕೊಂಡು ಒಮೆಗಾ–3 ಕೊಬ್ಬು, ವಿಟಮಿನ್‌ ಡಿ, ವಿಟಮಿನ್‌ ಎ, ವಿಟಮಿನ್‌ ಬಿ 1, 2 ಪೋಷಕಾಂಶಗಳು ಇರುವ ಚಿಪ್ಸ್‌ ಸಜ್ಜಾಗುತ್ತಿದೆ. ಚಿಪ್ಸ್‌ ಪೊಟ್ಟಣದ ಬೆಲೆ ₹ 30.

ADVERTISEMENT

‘ಮೀನು ಅತ್ಯಂತ ಆರೋಗ್ಯದಾಯಕ ಖಾದ್ಯ. ಯಾವುದೇ ರಾಸಾಯನಿಕ ಬಳಸದೆ ತಾಜಾ ರೀತಿಯಲ್ಲೇ ಚಿಪ್ಸ್ ತಯಾರಿಕೆ ನಡೆಯುತ್ತಿದೆ. ದೇಶದಲ್ಲೇ ಮೀನು ಉತ್ಪಾದನೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಇಂತಹ ಉಪ ಉತ್ಪನ್ನಗಳಿಂದ ಮೀನಿನ ಮೌಲ್ಯವರ್ಧನೆ ಅಧಿಕವಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಅರುಣ್‌ ಧನಪಾಲ್‌
ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.