ADVERTISEMENT

ಹೈಕೋರ್ಟ್‌ಗೆ ಐವರು ನೂತನ ನ್ಯಾಯಮೂರ್ತಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 20:15 IST
Last Updated 1 ನವೆಂಬರ್ 2018, 20:15 IST
   

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಐವರು ನೂತನ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.

ಹಾಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅಶೋಕ ಗೂಳಪ್ಪ ನಿಜಗಣ್ಣವರ, ಎಚ್.ಪಿ. ಸಂದೇಶ್, ಕೃಷ್ಣನ್ ನಟರಾಜನ್, ಪ್ರಹ್ಲಾದ ರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ ಮತ್ತು ಅಪ್ಪಾಸಾಹೇಬ ಶಾಂತಪ್ಪ ಬೆಳ್ಳುಂಕೆ ನೇಮಕಗೊಂಡಿರುವ ನೂತನ ನ್ಯಾಯಮೂರ್ತಿಗಳು.

ಅಶೋಕ ಗೂಳಪ್ಪ ನಿಜಗಣ್ಣವರ, ಎಚ್.ಪಿ.ಸಂದೇಶ್ ಮತ್ತು ಕೃಷ್ಣನ್ ನಟರಾಜನ್ ಅವರು ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಎರಡು ವರ್ಷಗಳ ಕಾಲ ಹುದ್ದೆಯಲ್ಲಿರುತ್ತಾರೆ.

ADVERTISEMENT

ಪ್ರಹ್ಲಾದ ರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ 2020ರ ಫೆಬ್ರುವರಿ 19ರವರೆಗೆ ಮತ್ತು ಅಪ್ಪಾಸಾಹೇಬ ಶಾಂತಪ್ಪ ಬೆಳ್ಳುಂಕೆ 2019ರ ಆಗಸ್ಟ್ 2ರವರೆಗೆ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೈಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 62. ಸದ್ಯ 28 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಏಳು ಮಂದಿ ಕಾಯಂ: ಇದೇ ವೇಳೆ, ರಾಜ್ಯ ಹೈಕೋರ್ಟ್‌ನ ಏಳು ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಲಾಗಿದೆ.

ಕಾಯಂಗೊಂಡವರು: ಕೆಂಪಯ್ಯ ಸೋಮಶೇಖರ್, ಕೊಟ್ರವ್ವ ಸೋಮಪ್ಪ ಮುದಗಲ್, ಶ್ರೀನಿವಾಸ ಹರೀಶ್ ಕುಮಾರ್, ಜಾನ್ ಮೈಕೆಲ್ ಕುನ್ಹ, ಬಸವರಾಜ ಅಂದಾನಗೌಡ ಪಾಟೀಲ, ನಂಗಲಿ ಕೃಷ್ಣರಾವ್ ಸುಧೀಂದ್ರರಾವ್ ಮತ್ತು ಹೊಸೂರು ಭುಜಂಗರಾವ್ ಪ್ರಭಾಕರ ಶಾಸ್ತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.