ADVERTISEMENT

ಸ್ವತ್ತುಗಳಿಗೆ ಡಿಜಿಟಲ್‌ ರಕ್ಷಣೆ: ಐದು ಮಸೂದೆಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ

ಕಂದಾಯ ಇಲಾಖೆಯ ಐದು ಮಸೂದೆಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
<div class="paragraphs"><p>ವಿಧಾನಸಭೆ</p></div>

ವಿಧಾನಸಭೆ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಸ್ವತ್ತು ನೋಂದಣಿ ಪ್ರಕ್ರಿಯೆ ಇನ್ನಷ್ಟು ಸರಳೀಕರಣಗೊಳಿಸಿ, ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಮಗ್ರ ಡಿಜಿಟಲೀಕರಣಗೊಳಿಸುವ ಉದ್ದೇಶದ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ಮಸೂದೆ ಸೇರಿ ಕಂದಾಯ ಇಲಾಖೆಯ ಒಟ್ಟು ಐದು ಮಸೂದೆಗಳು ಚರ್ಚೆಯ ಬಳಿಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡವು.

ADVERTISEMENT

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಸೂದೆಗಳನ್ನು ಪರ್ಯಾಲೋಚನೆಗೆ ಮಂಡಿಸಿದರು. ಚರ್ಚೆಯಲ್ಲಿ ಬಿಜೆಪಿಯ ಅರವಿಂದ ಬೆಲ್ಲದ, ಹರೀಶ್ ಪೂಂಜಾ, ವಿ.ಸುನಿಲ್‌ಕುಮಾರ್, ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನ ಡಾ.ಮಂತರ್‌ಗೌಡ ಭಾಗವಹಿಸಿದ್ದರು.

ಡಿಜಿಟಲ್‌ ಇ–ಸ್ಟಾಂಪ್‌ ಬಳಕೆ ಜಾರಿ:

(ಕರ್ನಾಟಕ ಸ್ಟಾಂಪು ತಿದ್ದುಪಡಿ ಮಸೂದೆ)

ಸ್ವತ್ತು ಮತ್ತು ಇತರ ನೋಂದಣಿಗಳಲ್ಲಿ ಡಿಜಿಟಲ್‌ ಸಹಿ, ಡಿಜಿಟಲ್‌ ಇ–ಸ್ಟಾಂಪ್‌ ಬಳಕೆ ಜಾರಿ ಆಗಲಿದೆ. ಈ ಹಿಂದಿನಂತೆ ಅಂಟಿಸುವ ಅಥವಾ ಮುದ್ರೆ ಹಾಕುವ ಸ್ಟಾಂಪ್‌ಗಳನ್ನು ಬಳಸುವುದನ್ನು ನಿಲ್ಲಿಸಲಾಗುತ್ತದೆ. ಇ–ಸ್ಟಾಂಪ್‌ ದುರುಪಯೋಗವನ್ನು ತಡೆಯಲು ಸ್ಟಾಂಪ್‌ ಮೊತ್ತವನ್ನು ವಿದ್ಯುನ್ಮಾನ ಪಾವತಿ ಮಾಡಬೇಕು. ಸಿಬ್ಬಂದಿ ಮೂಲಕ (ಮ್ಯಾನ್ಯುವಲ್) ಸ್ಟಾಂಪ್‌ ವಿತರಿಸುವುದು ಸಂಪೂರ್ಣ ನಿಲ್ಲಲಿದೆ.

ಡಿಜಿಟಲ್‌ ಸಹಿ ದುರುಪಯೋಗ ಆಗದಂತೆ ಮಾಡಲು ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿರುತ್ತದೆ. ಸಹಿ ದೃಢೀಕರಣಗೊಂಡರೆ ಮಾತ್ರ ಸಹಿ ಸಾಧ್ಯ. ಡಿಜಿಟಲ್‌ ಸಹಿಯಲ್ಲಿ ಬಯೋಮೆಟ್ರಿಕ್‌ ಕೂಡ ಇರುತ್ತದೆ. ಮುಂದಿನ ದಿನಗಳಲ್ಲಿ ಫೇಸ್‌ ರೆಕಗ್ನೆಷನ್ ಕೂಡ ಅಳವಡಿಸಲಾಗುತ್ತದೆ.

ಜಿಪಿಎ ಡೀಡ್‌ ನೋಂದಣಿ ಕಡ್ಡಾಯ:

(ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ )

ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ಬಳಸಿ ಅಕ್ರಮ ಮಾಡುವುದನ್ನು ತಡೆಗಟ್ಟಲು ಇನ್ನು ಮುಂದೆ ಸ್ಥಿರ ಸ್ವತ್ತಿನ ಜಿಪಿಎ ಡೀಡ್‌ ನೋಂದಣಿ ಮಾಡುವುದು ಕಡ್ಡಾಯ. ನೋಂದಣಿಯಾದ ಜಿಪಿಎ ಮಾತ್ರ ಅಧಿಕೃತ. ಅಲ್ಲದೇ, ಜಿಪಿಎ ಮೂಲಕ ಸ್ಥಿರ ಸ್ವತ್ತಿನ ವರ್ಗಾವಣೆ, ಸರ್ಕಾರದ ಮೂಲಕ ಮಂಜೂರಾದ ಸ್ಥಿರಸ್ವತ್ತಿಗೆ ಸಂಬಂಧಿಸಿದ ದಸ್ತಾವೇಜುಗಳ ನೋಂದಣಿ ಮತ್ತು ಜಿಪಿಎ ಹಾಜರುಪಡಿಸುವ ಮೂಲಕ ಕಡ್ಡಾಯವಾಗಿ ಋಜುವಾತು ಪಡಿಸಬೇಕು ಎಂಬ ಅಂಶಗಳನ್ನು ಮಸೂದೆ ಒಳಗೊಂಡಿದೆ.

ಕಂದಾಯ ಇಲಾಖೆಯ ಕಾನೂನಿನಲ್ಲಿ ಸಂಪೂರ್ಣ ಬದಲಾವಣೆ ತರುವ ಉದ್ದೇಶಕ್ಕೆ ಇದು ಮೊದಲ ಹೆಜ್ಜೆ. ಇನ್ನಷ್ಟು ಸುಧಾರಣಾ ಕ್ರಮಗಳು ಬರಲಿವೆ ಕೃಷ್ಣ ಬೈರೇಗೌಡ, ಕಂದಾಯ ಸಚಿವ
ಒಂದು ಕುಟುಂಬದಲ್ಲಿ ಆಸ್ತಿ ಪಾಲಾದಾಗ ಅಥವಾ ಪರಭಾರೆ ಆದಾಗ ಕುಮ್ಕಿ ಹಕ್ಕು ಇರುತ್ತದೆಯೋ ಇಲ್ಲವೋ, ಆ ಹಕ್ಕು ಯಾರಿಗೆ ಹೋಗುತ್ತದೆ ಹರೀಶ್‌ ಪೂಂಜಾ, ಬಿಜೆಪಿ ಸದಸ್ಯ
ಭೂಮಿಯ ಅಂತರವನ್ನು ಲೆಕ್ಕಹಾಕಲು ಏರಿಯಲ್‌ ವಿಧಾನ ಬಳಸುವುದು ಸರಿಯಲ್ಲ. ಇದನ್ನು ತೆಗೆದು ಹಾಕಬೇಕು ವಿ.ಸುನಿಲ್‌ಕುಮಾರ್, ಬಿಜೆಪಿ ಸದಸ್ಯ

ಭೂಬಂಧಿತ ಸರ್ಕಾರಿ ಭೂಮಿಗೆ ಹೊಸ ವ್ಯಾಖ್ಯೆ

ಕರ್ನಾಟಕ ಭೂಕಂದಾಯ(ತಿದ್ದುಪಡಿ) ಮಸೂದೆಯ ಮುಖ್ಯಾಂಶಗಳು ಹೀಗಿವೆ–

ಭೂಬಂಧಿತ ಸರ್ಕಾರಿ ಭೂಮಿ (ಲ್ಯಾಂಡ್‌ ಲಾಕ್ಡ್‌) ಮರು ವ್ಯಾಖ್ಯಾನ ಮಾಡಲಾಗಿದೆ. ಸರ್ವೆ ಸಂಖ್ಯೆಯೊಳಗಿರುವ ರಸ್ತೆ, ಕಾಲು ಹಾದಿ, ಬಂಡಿ ಹಾದಿಯ ಮೂಲಕ ಪ್ರವೇಶ ಸಾಧ್ಯವಿಲ್ಲದ ಭೂಮಿ, ಕೆರೆ–ಕುಂಟೆ, ಗೋಮಾಳ, ಬಳಕೆ ಮಾಡದ ಭೂಮಿಯನ್ನು ಸರ್ಕಾರಿ ಖರಾಬು ಭೂಮಿ ಎಂದು ಪರಿಗಣಿಸಿ, ಅದನ್ನು ಭೂಬಂಧಿತ ಭೂಮಿ ಎಂದು ವ್ಯಾಖ್ಯಾನಿಸಲಾಗಿದೆ. ಇಂತಹ ಭೂಬಂಧಿತ ಸರ್ಕಾರಿ ಭೂಮಿ ದುರುಪಯೋಗ ಮಾಡುವುದನ್ನು ತಡೆಯಲಾಗುವುದು.

  • ಕಂದಾಯ ಭೂಮಿಗಳಿಗೆ ನಿರ್ದಿಷ್ಟ ಹೆಸರುಗಳನ್ನು ಇಡಲು ಕಾನೂನಿನ ಬಲ ನೀಡಲು

  • ಕಂದಾಯ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ದಾಖಲೆಗಳನ್ನು ಪೋರ್ಜರಿ ಮತ್ತು ಕಳವು ಮಾಡುವುದನ್ನು ತಡೆಯಲು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುವ ಕ್ರಮವನ್ನು ಕೈಬಿಟ್ಟು, ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವುದು. ಇದರ ನಿರ್ವಹಣೆ ಜವಾಬ್ದಾರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಗಳಿಗೆ ವಹಿಸುವುದು.

  • ಸೀಲು ಮತ್ತು ಸ್ಟಾಂಪ್‌ಗಳ ದುರುಪಯೋಗವು ಶಿಕ್ಷಾರ್ಹ ಅಪರಾಧ

  • ರಿಜಿಸ್ಟರ್‌ಗಳು, ಲೆಕ್ಕಪತ್ರಗಳು ಮತ್ತು ಇತರ ದಾಖಲೆಗಳನ್ನು ಇಡುವ, ಸಂಗ್ರಹಿಸುವ ಮತ್ತು ಮರು ಪಡೆಯುವ ಅಧಿಕಾರ ತಹಶೀಲ್ದಾರ್‌ಗೆ

  • ಬಿಬಿಎಂಪಿ ಪರಿಮಿತಿಯಿಂದ 18 ಕಿ.ಮೀ ವರೆಗೆ, ಇತರ ನಗರಪಾಲಿಕೆಗಳು ಮತ್ತು ಪುರಸಭೆ ಪರಿಮಿತಿಯಿಂದ 5 ಕಿ.ಮೀವರೆಗಿನ ನಗರ ಪ್ರದೇಶಗಳಲ್ಲಿರುವ ಭೂಬಂಧಿತ ಸರ್ಕಾರಿ ಖರಾಬು ಭೂಮಿಯನ್ನು ಸರ್ಕಾರವು ವಿಲೇ ಮಾಡುವಂತಿಲ್ಲ.

  • ಗಡಿ ಗುರುತು ಅಳಿಸುವ, ತೆಗೆದು ಹಾಕುವ ಅಥವಾ ಹಾನಿ ಮಾಡುವವರಿಗೆ ₹500 ಜುಲ್ಮಾನೆ ವಿಧಿಸಲಾಗುವುದು.

ಭೂ ಕಬಳಿಕೆಗೆ ₹50 ಸಾವಿರ ದಂಡ
(ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ) ಮಸೂದೆ) ಭೂ ಕಬಳಿಕೆ ಕೃತ್ಯಗಳ ವಿಚಾರಣೆ ತ್ವರಿತವಾಗಿ ನಡೆಸಿ ಇತ್ಯರ್ಥಗೊಳಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸುವುದು, ಸರ್ಕಾರಿ ಭೂಮಿ ರಕ್ಷಿಸುವುದು ಮತ್ತು ಕಂದಾಯ ಅಧಿಕಾರಿಗಳು ಭೂಕಬಳಿಕೆ ತಡೆಯುವ ಪ್ರಾಥಮಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದಂತೆ ಹೊಣೆಗಾರಿಕೆಯನ್ನು ನಿಗದಿ. ಒತ್ತುವರಿ ಪ್ರಕರಣಗಳ ಅಂತರವನ್ನು ವೈಮಾನಿಕವಾಗಿಯೇ ಲೆಕ್ಕ ಹಾಕಬೇಕು. ಭೂಕಬಳಿಕೆ ದಂಡ ಪ್ರಮಾಣವನ್ನು ₹25 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಳ. ಕರ್ನಾಟಕ ಗ್ರಾಮ ಹುದ್ದೆಗಳ ರದ್ದತಿ (ತಿದ್ದುಪಡಿ) ಮಸೂದೆಗೂ ಒಪ್ಪಿಗೆ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.