ADVERTISEMENT

‘ಕೈ’ ಟಿಕೆಟ್‌ಗೆ ₹ 5 ಸಾವಿರ ಶುಲ್ಕ, ₹ 2 ಲಕ್ಷ ಡಿ.ಡಿ

ಸಂಗ್ರಹದ ಮೊತ್ತ ಕೆಪಿಸಿಸಿ ಕಟ್ಟಡ ಕಾಮಗಾರಿ ನಿಧಿಗೆ– ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 19:47 IST
Last Updated 2 ನವೆಂಬರ್ 2022, 19:47 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸುವ ಸಾಮಾನ್ಯ ವರ್ಗದ ಆಕಾಂಕ್ಷಿ ಗಳು ಕೆಪಿಸಿಸಿಗೆ ₹5 ಸಾವಿರ ಅರ್ಜಿ ಶುಲ್ಕದ ಜೊತೆಗೆ ₹2 ಲಕ್ಷದ ಡಿ.ಡಿ ಸಲ್ಲಿಸಬೇಕು. ಪರಿಶಿಷ್ಟರಿಗೆ ಡಿ.ಡಿಯಲ್ಲಿ ಶೇ 50ರಷ್ಟು ವಿನಾಯಿತಿ ನೀಡಲಾಗಿದೆ. ಹೀಗೆ ಸಂಗ್ರಹವಾಗುವ ಮೊತ್ತ ಕೆಪಿಸಿಸಿ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಪಕ್ಷ ಮುಂದಿನ ಚುನಾವಣೆಗೆ ಸಜ್ಜಾಗುತ್ತಿದ್ದು, ಟಿಕೆಟ್ ಬಯಸುವವರು ಇದೇ 5ರಿಂದ 15ರವ ರೆಗೆ ಅರ್ಜಿ ಸಲ್ಲಿಸಬಹುದು’ ಎಂದರು.

‘ಹಾಲಿ ಶಾಸಕರ ಸಮೇತ ಎಲ್ಲ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸ ಬಹುದು. ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಕೂಡ ಈ ಅರ್ಜಿ ಹಾಕಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ’ ಎಂದೂ ಅವರು ವಿವರಿಸಿದರು.

ADVERTISEMENT

‘ಪಕ್ಷದ ಟಿಕೆಟ್‌ಗೆ ಯಾವ ಮಾನ ದಂಡದಲ್ಲಿ ಹಣ ನೀಡಬೇಕು’ ಎಂಬ ಪ್ರಶ್ನೆಗೆ, ‘ಯಾವುದೇ ಮಾನದಂಡವಿಲ್ಲ. ಪಕ್ಷದ ಕಟ್ಟಡ, ಪಕ್ಷದ ನಿಧಿ, ಚುನಾವಣಾ ಪ್ರಚಾರ, ಜಾಹೀರಾತು ನೀಡಲು ಹಣ ಬೇಕಿದೆ. ಪಕ್ಷಕ್ಕೆ ₹ 20 ಸಾವಿರಕ್ಕಿಂತ ಹೆಚ್ಚಿನ ನಗದು ಪಡೆಯುವಂತಿಲ್ಲ. ನಮಗೆ ಯಾವುದೇ ಚುನಾವಣಾ ಬಾಂಡ್ ಬರುತ್ತಿಲ್ಲ. ಕಾರ್ಯಕರ್ತರಾದರೂ ಪಕ್ಷಕ್ಕೆ ಹಣ ನೀಡಲಿ’ ಎಂದರು.

‘ಅರ್ಜಿ ಹಾಕಲು ವಯೋಮಿತಿ ಇದೆಯೇ’ ಎಂಬ ಪ್ರಶ್ನೆಗೆ, ‘ನಮ್ಮಲ್ಲಿ ವಯೋಮಿತಿ ಇಲ್ಲ. 92 ವರ್ಷದ ಶಾಮನೂರು ಶಿವಶಂಕರಪ್ಪ ಅವರೂ ನಮ್ಮ ಜತೆಗಿದ್ದು,ಬೇರೆಯವರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ. ನಮ್ಮ ತಂದೆ ತಾಯಿಯನ್ನು ಮನೆಯಿಂದ ಆಚೆ ಹಾಕಲು ನಾನು ಅವಕಾಶ ನೀಡುವುದಿಲ್ಲ’ ಎಂದರು.

‘ಪಕ್ಷ ಬಿಟ್ಟು ಹೋದವರನ್ನು ಸೇರಿಸಿಕೊಳ್ಳುತ್ತೀರಾ’ ಎಂಬ ಪ್ರಶ್ನೆಗೆ, ‘ಈ ವಿಚಾರದಲ್ಲಿ ಮುಕ್ತ ಅವಕಾಶ ನೀಡಿದ್ದೇವೆ. ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಾಯಕತ್ವ ಒಪ್ಪಿ ಬೇಷರತ್ತಾಗಿ ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಬಹುದು. ಯಾರನ್ನು ಸೇರಿಸಿಕೊಳ್ಳಬೇಕೆಂದು ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿ ತೀರ್ಮಾನಿಸಲಿದೆ’ ಎಂದರು.

ಸದಸ್ಯತ್ವ ನೋಂದಣಿ ಆರಂಭ: ‘ಪಕ್ಷದ ಸದಸ್ಯತ್ವ ಪಡೆಯಲು ಹಲವರು ಉತ್ಸುಕರಾಗಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿ ಮತ್ತೆ ಆರಂಭಿಸಿದ್ದೇವೆ. ಬೇರೆ ಪಕ್ಷಗಳ ಕೆಲವು ನಾಯಕರು ಕಾಂಗ್ರೆಸ್‌ ಸೇರಲು ಬಯಸಿ ನನ್ನ ಸಂಪರ್ಕದಲ್ಲಿದ್ದಾರೆ. ಅವರ ಹೆಸರನ್ನು ಈಗ ಬಹಿರಂಗಪಡಿಸುವುದಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.