ADVERTISEMENT

ಸ್ಥಿರಾಸ್ತಿ ನೋಂದಣಿ ಶುಲ್ಕ ಶೇ2ಕ್ಕೆ ಏರಿಕೆ | ಇಂದಿನಿಂದಲೇ ಜಾರಿ: ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 23:30 IST
Last Updated 30 ಆಗಸ್ಟ್ 2025, 23:30 IST
   

ಬೆಂಗಳೂರು: ಸ್ಥಿರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಏರಿಸಿ ರಾಜ್ಯ ಸರ್ಕಾರವು ಆದೇಶಿಸಿದೆ. ಭಾನುವಾರದಿಂದಲೇ (ಆಗಸ್ಟ್‌ 31) ಇದು ಜಾರಿಯಾಗಲಿದ್ದು, ಸಾರ್ವಜನಿಕರು ಆಸ್ತಿ ನೋಂದಣಿಗೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ.

ಈ ಮೊದಲು ಸ್ಥಿರಾಸ್ತಿ ನೋಂದಣಿ ವೇಳೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ 5ರಷ್ಟು ಮುದ್ರಾಂಕ ಶುಲ್ಕ, ಶೇ 0.5ರಷ್ಟು ಸೆಸ್‌, ಶೇ 0.1ರಷ್ಟು ಸರ್ಚಾರ್ಜ್ ಮತ್ತು ಶೇ1ರಷ್ಟು ನೋಂದಣಿ ಶುಲ್ಕ ವಿಧಿಸಲಾಗುತ್ತಿತ್ತು. ಒಟ್ಟಾರೆ ಆಸ್ತಿ ನೋಂದಣಿ ವೇಳೆ, ಅದರ ಮಾರ್ಗಸೂಚಿ ಮೌಲ್ಯದ ಶೇ 6.6ರಷ್ಟು ವೆಚ್ಚವನ್ನು ಭರಿಸಬೇಕಾಗುತ್ತಿತ್ತು.

ಈಗ ನೋಂದಣಿ ಶುಲ್ಕವನ್ನು ಶೇ 2ರಷ್ಟಕ್ಕೆ ಹೆಚ್ಚಿಸಿರುವ ಕಾರಣ ಮುದ್ರಾಂಕ ಶುಲ್ಕ (ಶೇ 5), ಸೆಸ್‌ (ಶೇ 0.5) ಮತ್ತು ಸರ್ಚಾರ್ಜ್‌ (ಶೇ 0.1) ಸೇರಿ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ 7.6ರಷ್ಟನ್ನು ನೋಂದಣಿ ವೇಳೆ ಭರಿಸಬೇಕಾಗುತ್ತದೆ.

ADVERTISEMENT

‘ಹಿಂದಿನ ನೋಂದಣಿ ಶುಲ್ಕವನ್ನು ಪಾವತಿಸಿ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ದಿನಾಂಕ ಪಡೆದಿರುವವರು ಮತ್ತು ಶುಲ್ಕ ಪಾವತಿಸಿದ್ದು, ದಿನಾಂಕ ಪಡೆಯದವರು ಪರಿಷ್ಕೃತ ಶುಲ್ಕದ ವ್ಯತ್ಯಾಸವನ್ನು ಪಾವತಿಸಲೇಬೇಕು’ ಎಂದು ನೋಂದಣಿ ಮತ್ತು ಮುದ್ರಾಂಕ ಆಯುಕ್ತ ಮುಲೈ ಮುಗಿಲನ್ ತಿಳಿಸಿದ್ದಾರೆ. 

‘ಮೊದಲು ಬಳಸಿದ ಲಾಗಿನ್‌ ಬಳಸಿಕೊಂಡೇ ಪರಿಷ್ಕೃತ ಶುಲ್ಕದ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕು. ಅರ್ಜಿದಾರರಿಗೆ ನೆರವಾಗುವ ದೃಷ್ಟಿಯಿಂದ ಪರಿಷ್ಕೃತ ಶುಲ್ಕ, ಮತ್ತಿತರ ವಿವರಗಳನ್ನು ಅವರ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈಗಾಗಲೇ ನೋಂದಣಿಗೆ ಸಲ್ಲಿಸಲಾಗಿರುವ ದಸ್ತಾವೇಜುಗಳಿಗೆ ಮತ್ತು ಪರಿಶೀಲನೆಯಲ್ಲಿರುವ ದಸ್ತಾವೇಜುಗಳಿಗೆ ನೋಂದಣಿ ಶುಲ್ಕವನ್ನು ಮರು ಲೆಕ್ಕಹಾಕಲಾಗುವುದು. ಇಂತಹ ಅರ್ಜಿದಾರರಿಗೆ ಪಾವತಿಗೆ ಮುನ್ನವೇ, ಪರಿಷ್ಕೃತ ನೋಂದಣಿ ಶುಲ್ಕದ ವಿವರವನ್ನು ತಿಳಿಸಲಾಗುವುದು’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.