ADVERTISEMENT

ಸಿನಿಮೀಯ ರೀತಿ ಲಾರಿ ಹಿಂಬಾಲಿಸಿ ‘ಫ್ಲಿಪ್‌ಕಾರ್ಟ್‌’ ಮೊಬೈಲ್ ಬಾಕ್ಸ್ ಕಳ್ಳತನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:29 IST
Last Updated 6 ಫೆಬ್ರುವರಿ 2026, 16:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾವೇರಿ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿನಿಂದ ಧಾರವಾಡಕ್ಕೆ ಹೊರಟಿದ್ದ ಲಾರಿಯನ್ನು ಹಿಂಬಾಲಿಸಿ ಮೊಬೈಲ್ ಬಾಕ್ಸ್‌ಗಳನ್ನು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಫ್ಲಿಪ್‌ಕಾರ್ಟ್‌ ಇ–ಕಾಮರ್ಸ್ ಕಂಪನಿಗೆ ಸೇರಿದ್ದ ವಸ್ತುಗಳನ್ನು ಫೆ. 1ರಂದು ಕಳ್ಳತನ ಮಾಡಿರುವ ಬಗ್ಗೆ ಲಾರಿಯ ಚಾಲಕ ಮಲಿಕಜಾನ್ ಮುಲ್ಲಾ ಅವರು ದೂರು ನೀಡಿದ್ದಾರೆ. ಕೃತ್ಯ ಎಸಗಿರುವ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರದ ಮಲಿಕಜಾನ್, ಹಲವು ವರ್ಷಗಳಿಂದ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಫ್ಲಿಪ್‌ಕಾರ್ಟ್‌ ಇ–ಕಾಮರ್ಸ್ ಕಂಪನಿಗೆ ಸೇರಿದ್ದ ವಸ್ತುಗಳನ್ನು ಬೆಂಗಳೂರಿನ ಗೋದಾಮಿನಿಂದ ವಿವಿಧ ಗೋದಾಮುಗಳಿಗೆ ಲಾರಿ ಮೂಲಕ ಸಾಗಿಸುವ ಜವಾಬ್ದಾರಿ ಹೊತ್ತುಕೊಂಡಿದ್ದರು. ಕೃತ್ಯದ ಬಗ್ಗೆ ಅವರಿಂದ ಹೇಳಿಕೆ ಪಡೆದುಕೊಂಡು, ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದರು.

‘ಫ್ಲಿಪ್‌ಕಾರ್ಟ್‌ ಇ–ಕಾಮರ್ಸ್ ಕಂಪನಿಯ ಜಾಲತಾಣದಿಂದ ಗ್ರಾಹಕರು ವಿವಿಧ ವಸ್ತುಗಳನ್ನು ಖರೀದಿಸುತ್ತಾರೆ. ಅಂಥ ವಸ್ತುಗಳನ್ನು ಬೆಂಗಳೂರಿನ ಗೋದಾಮಿನಲ್ಲಿ ಇರಿಸಲಾಗಿರುತ್ತದೆ. ಗ್ರಾಹಕರ ಆರ್ಡರ್‌ ಪ್ರಕಾರ, ಬೆಂಗಳೂರಿನ ಗೋದಾಮಿನ ವಸ್ತುಗಳನ್ನು ಬೇರೆ ಬೇರೆ ಊರುಗಳಿಗೆ ಲಾರಿ ಮೂಲಕ ಕಳುಹಿಸಲಾಗುತ್ತದೆ. ಅಲ್ಲಿಂದ, ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಲಾಗುತ್ತದೆ.’

‘ಬೆಂಗಳೂರಿನ ಗೋದಾಮಿನಲ್ಲಿದ್ದ ಮೊಬೈಲ್ ಹಾಗೂ ಇತರೆ ವಸ್ತುಗಳ ಬಾಕ್ಸ್‌ಗಳನ್ನು ಲಾರಿಯಲ್ಲಿ (ಕೆಎ 22 ಡಿ 0666) ತುಂಬಿಕೊಂಡು, ಧಾರವಾಡದ ಕೋಟೂರು ಗ್ರಾಮದ ಬಳಿ ಇರುವ ಗೋದಾಮಿಗೆ ಕೊಂಡೊಯ್ಯಲಾಗುತ್ತಿತ್ತು. ಲಾರಿಯ ಹಿಂಭಾಗದಲ್ಲಿದ್ದ ಬಾಗಿಲಿಗೆ ಲಿಂಕಿಟ್ ಉಪಕರಣ (ಲಾಕ್) ಅಳವಡಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹೊರಟಿತ್ತು. ಇದೇ ಸಂದರ್ಭದಲ್ಲಿ ಲಾರಿಯನ್ನು ಹಿಂಬಾಲಿಸಿದ್ದರು ಎನ್ನಲಾದ ಆರೋಪಿಗಳು, ಲಾರಿಯ ಹಿಂಭಾಗದ ಬಾಗಿಲಿನ ಲಾಕ್ ತೆರೆದಿದ್ದಾರೆ. ನಂತರ, ₹ 24.91 ಲಕ್ಷ ಮೌಲ್ಯದ ಮೊಬೈಲ್‌ಗಳು ಹಾಗೂ ಇತರೆ ವಸ್ತುಗಳ 6 ಬಾಕ್ಸ್‌ಗಳನ್ನು ಕದ್ದೊಯ್ದಿದ್ದಾರೆ. ಬಳಿಕ, ಗೋದಾಮಿಗೆ ಹೋಗಿದ್ದ ಚಾಲಕ ಪರಿಶೀಲನೆ ನಡೆಸಿದ ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ತಿಳಿಸಿದರು.

‘ಸಿನಿಮೀಯ ರೀತಿಯಲ್ಲಿ ಸಂಚು ರೂಪಿಸಿ, ಲಾರಿಯನ್ನು ಹಿಂಬಾಲಿಸಿ ಆರೋಪಿಗಳು ಕೃತ್ಯ ಎಸಗಿರುವ ಅನುಮಾನವಿದೆ. ಆದರೆ, ದೂರಿನಲ್ಲೂ ಕೆಲ ಗೊಂದಲಗಳಿವೆ. ಲಾರಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇರದಿರುವುದು ಅನುಮಾನ ಮೂಡಿಸಿದೆ. ಸೂಕ್ತ ಪುರಾವೆಗಳನ್ನು ಕಲೆಹಾಕಿ ಪರಿಶೀಲಿಸಿದಾಗಲೇ, ನೈಜ ಆರೋಪಿಗಳು ಯಾರು ಎಂಬುದು ತಿಳಿಯಬೇಕು’ ಎಂದು ಪೊಲೀಸರು ಹೇಳಿದರು.

ಹೆದ್ದಾರಿಯ ಕ್ಯಾಮೆರಾ ನಿಷ್ಕ್ರಿಯ

‘ಕಾಕೋಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎರಡು ಕ್ಯಾಮೆರಾಗಳು ನಿರ್ವಹಣೆ ಇಲ್ಲದೇ ನಿಷ್ಕ್ರಿಯಗೊಂಡಿವೆ. ಇದರಿಂದಾಗಿ, ಲಾರಿಯನ್ನು ಹಿಂಬಾಲಿಸಿ ಕೃತ್ಯ ಎಸಗಿದವರು ಯಾರು ಎಂಬುದರ ಬಗ್ಗೆ ಸದ್ಯಕ್ಕೆ ಸುಳಿವು ಸಿಕ್ಕಿಲ್ಲ’ ಎಂದು ಪೊಲೀಸರು ಹೇಳಿದರು.

‘ಹೆದ್ದಾರಿ ರಸ್ತೆ ವಿಸ್ತರಣೆ ಹಾಗೂ ಇತರೆ ಕಾರಣಗಳಿಂದ ಕ್ಯಾಮೆರಾಗಳು ಹಾಳಾಗಿವೆ. ಅದರ ದುರಸ್ತಿ ಆಗಿಲ್ಲ. ನಿರ್ವಹಣೆಯೂ ಸಮರ್ಪಕವಾಗಿಲ್ಲ. ಕ್ಯಾಮೆರಾ ಅಳವಡಿಕೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.