ADVERTISEMENT

ಮಡಿಕೇರಿ | ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧ

ಕಾರ್ಯಾಚರಣೆ ತಂಡಕ್ಕೆ ಉದಯಗಿರಿ, ಹಾರಂಗಿ ಹಿನ್ನೀರು ಪ್ರದೇಶದಲ್ಲಿ ತರಬೇತಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 15:24 IST
Last Updated 28 ಜೂನ್ 2020, 15:24 IST
ತರಬೇತಿ ನಿರತ ರಕ್ಷಣಾ ತಂಡದ ಸಿಬ್ಬಂದಿ
ತರಬೇತಿ ನಿರತ ರಕ್ಷಣಾ ತಂಡದ ಸಿಬ್ಬಂದಿ   

ಮಡಿಕೇರಿ: ಜಿಲ್ಲೆಯಾದ್ಯಂತ ಮುಂಗಾರು ಆರಂಭಗೊಂಡಿದ್ದು, ಪ್ರಾಕೃತಿಕ ವೀಕೋಪ ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯು ಸನ್ನದ್ಧವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ತಿಳಿಸಿದರು.

2018 ಮತ್ತು 2019ರಲ್ಲಿ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ಮತ್ತು ಜೀವ ಹಾನಿಗಳು ಸಂಭವಿಸಿದ್ದವು. ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತಾಲೀಮು ನೀಡಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 4 ಅಗ್ನಿಶಾಮಕ ಠಾಣೆಗಳು ಮಡಿಕೇರಿ, ಗೋಣಿಕೊಪ್ಪಲು, ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲಾಖೆಯಿಂದ ಮತ್ತು ಜಿಲ್ಲಾಡಳಿತದಿಂದ ಬೋಟ್‍ಗಳು, ಲೈಫ್ ಜಾಕೆಟ್‍ಗಳು ಸೇರಿದಂತೆ ಅವಶ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಕಳೆದ 2 ವರ್ಷಗಳ ಅನುಭವದಿಂದ ಈ ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮೊದಲೇ ಜನರ ಸ್ಥಳಾಂತಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರವಾಹ ಸಂದರ್ಭದಲ್ಲಿ ನೀರಿನಲ್ಲಿ ಇಳಿದು ಕಾರ್ಯನಿರ್ವಹಿಸಲು ಲೈಫ್ ಜಾಕೆಟ್‍ಗಳನ್ನೂ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಇಲಾಖೆಯಿಂದ ಬೋಟ್‍ಗಳನ್ನು ಒದಗಿಸಿರುವುದರಿಂದ ಬೋಟ್ ಚಾಲನೆಯ ಬಗ್ಗೆ ಪ್ರತಿಯೊಬ್ಬ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಇದರೊಂದಿಗೆ ಪರಿಸ್ಥಿತಿಯ ಅನುಸಾರ ಪ್ರಥಮ ಚಿಕಿತ್ಸೆ ಮಾಡುವ ಬಗ್ಗೆ, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆಯೂ ತಾಲೀಮು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎನ್‍ಡಿಆರ್‌ಎಫ್, ಪೊಲೀಸ್ ಇಲಾಖೆ, ಹೋಂಗಾರ್ಡ್ಸ್‌ ಮತ್ತು ಅಗ್ನಿಶಾಮಕ ಇಲಾಖೆಯು ಜಂಟಿಯಾಗಿ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಂಟಿ ಅಭ್ಯಾಸ ನಡೆಸಲಾಗಿದೆ. ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಜಂಟಿ ತಾಲೀಮು ನಡೆಸಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಮತ್ತು ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉದಯಗಿರಿ ಗುಡ್ಡ ಕುಸಿತ ಪ್ರದೇಶದಲ್ಲಿಯೂ ಭೂಕುಸಿತ ಸಂದರ್ಭ ರೋಪ್ ಬಳಕೆಯ ಬಗ್ಗೆ ಮತ್ತು ತೊಂದರೆಗೊಳಗಾದವರನ್ನು ರಕ್ಷಿಸುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.