ADVERTISEMENT

ಪ್ರವಾಹ: ವಿಶೇಷ ಅಧಿವೇಶನ ಕರೆಯಿರಿ–ಸಿದ್ದರಾಮಯ್ಯ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 20:26 IST
Last Updated 26 ಅಕ್ಟೋಬರ್ 2020, 20:26 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಪ್ರವಾಹ ಪೀಡಿತ ಸರಡಗಿ (ಬಿ) ಗ್ರಾಮದ ಹೊಲಕ್ಕೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. ಶಾಸಕರಾದ ಡಾ. ಅಜಯ್ ಸಿಂಗ್,  ಎಂ.ವೈ.ಪಾಟೀಲ್, ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಇದ್ದರು
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಪ್ರವಾಹ ಪೀಡಿತ ಸರಡಗಿ (ಬಿ) ಗ್ರಾಮದ ಹೊಲಕ್ಕೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. ಶಾಸಕರಾದ ಡಾ. ಅಜಯ್ ಸಿಂಗ್,  ಎಂ.ವೈ.ಪಾಟೀಲ್, ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಇದ್ದರು   

ಕಲಬುರ್ಗಿ: ‘ರಾಜ್ಯದ 20 ಜಿಲ್ಲೆಗಳಲ್ಲಿ ಸಂಭವಿಸಿರುವ ಪ್ರವಾಹದ ನಷ್ಟ ಕುರಿತು ಚರ್ಚಿಸಲು ಶೀಘ್ರ ವಿಶೇಷ ಅಧಿವೇಶನ ‌ಕರೆಯಬೇಕು‌’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ‌ರಾಜ್ಯ ಸರ್ಕಾರ ಎಡವಿದೆ. ಪ್ರವಾಹ ಸಂತ್ರಸ್ತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈವರೆಗೆ ನಯಾಪೈಸೆ ಬಿಡುಗಡೆ ‌ಮಾಡಿಲ್ಲ. ಬೆಳೆ ನಷ್ಟದಿಂದ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಆದ್ದರಿಂದ ಈ ಬಗ್ಗೆ ಚರ್ಚಿಸಲು ಕೊರೊನಾ ನೆಪ ಹೇಳದೇ ತಕ್ಷಣ ಅಧಿವೇಶನ ಕರೆಯಲಿ’ ಎಂದರು.

‘ರಾಜ್ಯ ಸರ್ಕಾರ ಲೂಟಿ ಮಾಡುವಲ್ಲಿ ನಿರತವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಲೋಕೋಪಯೋಗಿ, ಜಲಸಂಪನ್ಮೂಲ, ಸಮಾಜ ಕಲ್ಯಾಣ ದಂತಹ ಪ್ರಮುಖ ಇಲಾಖೆಗಳಿಂದ ಅನುದಾನ ತರಲು ಶೇ 10ರಷ್ಟು ಕಮಿಷನ್ ಕೊಡಬೇಕಿದೆ. ಕೊಪ್ಪಳ ಜಿಲ್ಲೆಯ ಬಿಜೆಪಿ ಮುಖಂಡರೇ ಕಮಿಷನ್ ಕೊಟ್ಟು ಅನುದಾನ ತಂದಿರುವುದನ್ನು ನಾನು ದಾಖಲೆ ಸಮೇತ ಸಾಬೀತುಪಡಿಸುತ್ತೇನೆ’ ಎಂದು ಹೇಳಿದರು.

ADVERTISEMENT

‘ರಾಜ್ಯಕ್ಕೆ ಕೇಂದ್ರ ಸರ್ಕಾರವು ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ರಾಜ್ಯಕ್ಕೆ ₹ 5,495 ಕೋಟಿ ವಿಶೇಷ ಅನುದಾನ ನೀಡಲು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಆದರೆ, ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಶಿಫಾರಸು ಹಿಂಪಡೆಯುವಂತೆ ಆಯೋಗಕ್ಕೆ ಪತ್ರ ಬರೆದಿದ್ದಾರೆ’ ಎಂದು ‌ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.