ADVERTISEMENT

ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ತಗ್ಗದ ಪ್ರವಾಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 20:18 IST
Last Updated 18 ಅಕ್ಟೋಬರ್ 2020, 20:18 IST
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದರವಾಡದಲ್ಲಿ ಭೀಮಾ ನೀರಿನಲ್ಲಿ ಮನೆ ಮುಳುಗಿದ್ದು, ಅಸಹಾಯಕ ಸ್ಥಿತಿಯಲ್ಲಿ ನಿಂತ ಮನೆಯ ಮಾಲೀಕ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ -ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದರವಾಡದಲ್ಲಿ ಭೀಮಾ ನೀರಿನಲ್ಲಿ ಮನೆ ಮುಳುಗಿದ್ದು, ಅಸಹಾಯಕ ಸ್ಥಿತಿಯಲ್ಲಿ ನಿಂತ ಮನೆಯ ಮಾಲೀಕ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ -ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ: ಭೀಮಾ ನದಿ ಇನ್ನೂ ಭೋರ್ಗರೆಯುತ್ತಲೇ ಇದೆ. ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಲೇ ಇದೆ.

ಸೋಮವಾರ ವೇಳೆಗೆ ಯಾದಗಿರಿ ಜಿಲ್ಲೆಯಲ್ಲಿ ಭೀಮಾ ನದಿಯಲ್ಲಿ ಹಾಗೂ ಭೀಮಾ ನದಿ ಕೃಷ್ಣೆಯನ್ನು ಸೇರುವ ಕಾರಣ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ರಕ್ಷಣಾ ಕಾರ್ಯಾ
ಚರಣೆಗೆ ಈ ಜಿಲ್ಲೆಗಳಿಗೂ ಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಪಾಯದ ಅಂಚಿನಲ್ಲಿದ್ದ 69 ಗ್ರಾಮಗಳ 22 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 150 ಕಾಳಜಿ ಕೇಂದ್ರಗಳನ್ನು ತೆರೆದು, ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. ರಾಯಚೂರು ಜಿಲ್ಲೆಯ ನದಿ ತೀರದ 17 ಗ್ರಾಮಗಳ ಜನರ ಸ್ಥಳಾಂತರಕ್ಕೆ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ADVERTISEMENT

ಮಹಾರಾಷ್ಟ್ರದ ಉಜನಿ ಹಾಗೂ ವೀರ್‌ ಜಲಾಶಯಗಳಿಂದ ನಿರಂತರವಾಗಿನೀರು ಹರಿಸುತ್ತಿರುವ ಕಾರಣ ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಿನ ಅವಾಂತರ ಸೃಷ್ಟಿಸಿದ್ದು, ನದಿ ತೀರದ ಹಲವು ಗ್ರಾಮಗಳು ನಡುಗಡ್ಡೆಗಳಾಗಿವೆ.

ಅಫಜಲಪುರ ತಾಲ್ಲೂಕಿನ ಸೊನ್ನ, ಶಿರವಾಳ, ಗೌರ, ಜೇವರ್ಗಿ ತಾಲ್ಲೂಕಿನ ಮಂದರವಾಡ, ಕೋಬಾಳ, ರಾಸಣಗಿ, ಹಂದನೂರು ಗ್ರಾಮಗಳನ್ನು ಸಂಪೂರ್ಣ ಖಾಲಿ ಮಾಡಿಸಲಾಗಿದೆ. ನೀರು ಊರನ್ನು ಸುತ್ತುವರಿದ ಕಾರಣ ಇವು ಹೊರಗಿನ ಸಂಪರ್ಕವನ್ನೇ ಕಡಿದುಕೊಂಡಿವೆ. ಉಡಚಣ, ಶಿರವಾಳ, ಮಣೂರ ಗ್ರಾಮಗಳಲ್ಲಿ ಕಾರ್ಯಾ
ಚರಣೆ ನಡೆಸಿದ ಸೇನೆಯ ತಂಡ ಅಲ್ಲಿಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿತು.

‘ಭಾನುವಾರ ಬೆಳಿಗ್ಗೆ ನೀರು ಹರಿಸುವ ಪ್ರಮಾಣವನ್ನು 10 ಲಕ್ಷ ಕ್ಯುಸೆಕ್‌ಗೆ ಏರಿಸಲಾಗುವುದು ಎಂದು ಮಹಾರಾಷ್ಟ್ರದಿಂದ ಮುನ್ಸೂಚನೆ ಬಂದಿತ್ತು. ಆದರೆ, ಭಾನುವಾರ ಸಂಜೆ 5ರವರೆಗೂ 8 ಲಕ್ಷ ಕ್ಯುಸೆಕ್‌ ಮಾತ್ರ ನಿರಂತರವಾಗಿ ಹರಿದುಬರುತ್ತಿದೆ. ಹಾಗಾಗಿ, ಸದ್ಯಕ್ಕೆ ಪ್ರವಾಹ ತಗ್ಗುವ ಮತ್ತು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ’ ಇಲ್ಲ ಎಂದು ಕಲಬುರ್ಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ನ್ಸಾತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ರೋಜಾ, ಹುರಸಗುಂಡಗಿ, ಶಿವನೂರ, ಕುಮನೂರ, ಆನೂರ (ಬಿ), ಆನೂರ (ಕೆ), ರೋಜಾ ಎಸ್., ಅಣಬಿ, ಹಬ್ಬಳ್ಳಿ, ಮರಮಕ, ನಾಲವಡಗಿ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ.

ಟ್ರ್ಯಾಕ್ಟರ್‌ಗಳೇ ಆಸರೆ: ಅಫಜಲಪುರ ತಾಲ್ಲೂಕು ಶಿರವಾಳದಲ್ಲಿ ರಸ್ತೆ ಮೇಲೆ ನೀರು ತುಂಬಿಕೊಂಡಿದ್ದರಿಂದ ಬಸ್‌ ನೀರಿನಲ್ಲೇ ನಿಂತಿತ್ತು. ಟ್ರ್ಯಾಕ್ಟರ್‌ ಮೂಲಕ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು. ಹೊಲ–ಗದ್ದೆಗಳಲ್ಲಿ ಸಿಲುಕಿಕೊಂಡವರನ್ನು ಟ್ರ್ಯಾಕ್ಟರ್‌ ಮೂಲಕಕರೆ ತರಲಾಗುತ್ತಿದೆ.

ಸಂಸದರಿಗೆ ಮುತ್ತಿಗೆ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಮುತ್ತಗಾ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಸಂಸದ ಡಾ.ಉಮೇಶ ಜಾಧವ ಅವರ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು.

‘ಜಮೀನು ಮಾಲೀಕರೊಬ್ಬರು ನ್ಯಾಯಾಲಯಕ್ಕೆ ಹೋಗಿದ್ದರಿಂದ ಆ ಗ್ರಾಮಕ್ಕೆ ರಸ್ತೆ ಕಾಮಗಾರಿ ನಡೆದಿಲ್ಲ. ರಸ್ತೆ ಮಾಡಿಸಿಕೊಡುವಂತೆ ಗ್ರಾಮಸ್ಥರು ಕೋರಿದರು’ ಎಂದು ಸಂಸದ ಜಾಧವ ಸಮಜಾಯಿಷಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.