ADVERTISEMENT

ಪ್ರವಾಹ: ರಾಜ್ಯಕ್ಕೆ ₹ 1,869 ಕೋಟಿ

7 ರಾಜ್ಯಗಳಿಗೆ ಕೇಂದ್ರದಿಂದ ₹ 5,908 ಕೋಟಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 20:07 IST
Last Updated 6 ಜನವರಿ 2020, 20:07 IST
ಪ್ರವಾಹ
ಪ್ರವಾಹ   

ನವದೆಹಲಿ: ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಯಿಂದ ₹1,869.85 ಕೋಟಿ ಪರಿಹಾರ ನೀಡಿದೆ.

ಸಂಕಷ್ಟಕ್ಕೆ ಒಳಗಾಗಿರುವ ದೇಶದ 13 ರಾಜ್ಯಗಳ ಪೈಕಿ ಕರ್ನಾಟಕ ಸೇರಿದಂತೆ 7 ರಾಜ್ಯಗಳಿಗೆ ₹5,908.56 ಕೋಟಿ ಹೆಚ್ಚುವರಿ ಪರಿಹಾರ ಒದಗಿಸುವ ನಿರ್ಧಾರವನ್ನು ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಉನ್ನತ ಮಟ್ಟದ ಸೋಮವಾರ ಸಭೆ ನಿರ್ಧರಿಸಿತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ನೀತಿ ಆಯೋಗದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಭಾರಿ ಪ್ರವಾಹ, ಮೇಘ ಸ್ಫೋಟ, ಭೂ ಕುಸಿತದಂತಹ ನೈಸರ್ಗಿಕ ವಿಕೋಪದಿಂದ ಸಂಕಷ್ಟಕ್ಕೆ ಈಡಾಗಿರುವ ರಾಜ್ಯಗಳಿಗೆ ಕೇಂದ್ರವು ಸಕಾಲಕ್ಕೆ ಎಲ್ಲ ರೀತಿಯ ನೆರವು ಒದಗಿಸುತ್ತಿದೆ ಎಂದುತಿಳಿಸಿದೆ.

ADVERTISEMENT

₹ 38,000 ಕೋಟಿ ನಷ್ಟ: ಕಳೆದ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸುರಿದಿದ್ದ ಭಾರಿ ಮಳೆ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ₹ 38,000 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿ ಆಧರಿಸಿ ಕೇಂದ್ರವು ಅಕ್ಟೋಬರ್‌ 4ರಂದು ಮುಂಗಡ ಪರಿಹಾರದ ರೂಪದಲ್ಲಿ 1,200 ಕೋಟಿ ಮಂಜೂರು ಮಾಡಿತ್ತು.ಇದೀಗ ಮಂಜೂರಾಗಿರುವ ಮೊತ್ತವೂ ಸೇರಿ ರಾಜ್ಯವು ಪ್ರವಾಹ ಪರಿಹಾರ ರೂಪದಲ್ಲಿ ಒಟ್ಟು ₹3,069.85 ಕೋಟಿ ಪಡೆದಂತೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.