ADVERTISEMENT

ಶನಿವಾರಸಂತೆ | ಪ್ಲಾಸ್ಟಿಕ್‌ ಕ್ಯಾನ್‌ಗಳಿಂದ ಹೂಕುಂಡ

ಶಾಲೆಗೆ ಅಗತ್ಯವಿರುವ ಹೂಕುಂಡಗಳನ್ನು ಸಿದ್ಧಪಡಿಸಿ ಶಿಕ್ಷಕ

ಶ.ಗ.ನಯನತಾರಾ
Published 5 ಜೂನ್ 2020, 4:25 IST
Last Updated 5 ಜೂನ್ 2020, 4:25 IST
ಶನಿವಾರಸಂತೆ ಸಮೀಪದ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಅವರು ಪ್ಲಾಸ್ಟಿಕ್‌ ವಸ್ತುಗಳಿಂದ ಹೂವಿನ ಕುಂಡಗಳನ್ನು ನಿರ್ಮಿಸಿದ್ದಾರೆ
ಶನಿವಾರಸಂತೆ ಸಮೀಪದ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಅವರು ಪ್ಲಾಸ್ಟಿಕ್‌ ವಸ್ತುಗಳಿಂದ ಹೂವಿನ ಕುಂಡಗಳನ್ನು ನಿರ್ಮಿಸಿದ್ದಾರೆ   

ಶನಿವಾರಸಂತೆ: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ವಸ್ತುಗಳಿಗೆ ಹೊಸ ರೂಪ ನೀಡಿ ಮರುಬಳಕೆ ಮಾಡುವುದರಲ್ಲಿ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್‌.ಸತೀಶ್‌ ಸಿದ್ಧಹಸ್ತರು.

ಮನೆ ಬಳಕೆಗೆ ತಂದ ಅಡುಗೆ ಎಣ್ಣೆಯ ಕ್ಯಾನ್‌ಗಳು, ನೀರಿನ ಬಾಟಲಿ ಹಾಗೂ ಕಂಫರ್ಟ್ ಡಬ್ಬಗಳನ್ನು ಬಳಸಿಕೊಂಡು ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ. ಅವುಗಳ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಿದ್ದು, ನೋಡಲು ಸುಂದರವಾಗಿವೆ. ಅಲ್ಲದೆ, ಸಾಮಾನ್ಯ ಕುಂಡಗಳಿಗಿಂತಲೂ ಇವು ಗಟ್ಟಿಮುಟ್ಟಾಗಿವೆ.

ಈ ಕ್ಯಾನ್‌ಗಳು ನೆಲದಲ್ಲಿ ಇಡುವ ಕುಂಡಗಳು ಮಾತ್ರವಲ್ಲ; ಹ್ಯಾಂಗಿಂಗ್ ಪಾಟ್‌ಗಳು, ಗೋಡೆ ಮತ್ತು ಕಂಬಗಳಿಗೆ ಸಿಕ್ಕಿಸುವ ವಾಲ್ ಪಾಟ್‌ಗಳನ್ನಾಗಿಯೂ ಬಳಸಬಹುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶದಿಂದ, ಹ್ಯಾಂಗಿಂಗ್ ಪಾಟ್‌ನ ಮೇಲೆ ಸುರಿದ ನೀರು ಹೆಚ್ಚಾದರೆ ಒಂದೆಡೆ ಸಂಗ್ರಹವಾಗುವ ಹಾಗೆ ನೀರಿನ ಬಾಟಲಿಗಳ ತಳಭಾಗವನ್ನು ಕೊಯ್ದು ಹ್ಯಾಂಗಿಂಗ್ ಪಾಟಿನ ತಳಭಾಗದಲ್ಲಿ ಅಳವಡಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಪಕ್ಷಿಗಳು ಕುಡಿಯುವಂತೆ ಮಾಡಲಾಗಿದೆ.

ADVERTISEMENT

ಲಾಕ್‌ಡೌನ್‌ನ ರಜಾ ಅವಧಿಯಲ್ಲಿ ಈ ಹೂವಿನ ಕುಂಡಗಳನ್ನು ಸಿದ್ಧಪಡಿಸಿರುವ ಸತೀಶ್‌ ಅವರು ಈ ಹಿಂದೆ, ಹಳೆಯ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಬಳಸಿ ಯೂರಿನಲ್ ಕಮೊಡ್‌ಗಳನ್ನೂ ನಿರ್ಮಿಸಿದ್ದರು.

‘ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಬೇಕು. ಮನೆಗಳಿಗೆ ಅಗತ್ಯವಿರುವ ಅಲಂಕಾರಿಕ ಪಾಟ್‌ಗಳನ್ನು ಯಾವುದೇ ಖರ್ಚಿಲ್ಲದೆ ತಯಾರಿಸಬಹುದು’ ಎನ್ನುತ್ತಾರೆ ಸತೀಶ್‌.

ಸತೀಶ್ ಅವರು ತಮ್ಮ ಮನೆಗೆ ತರುವ ದಿನಸಿ ಸಾಮಾನುಗಳ ಚಿಕ್ಕಚಿಕ್ಕ ಪ್ಲಾಸ್ಟಿಕ್‌ ಕವರ್‌ಗಳಿಗೆ ಮಣ್ಣು ತುಂಬಿಸಿ ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.