ADVERTISEMENT

ಸಿದ್ಧೇಶ್ವರ ಶ್ರೀ ಆರೋಗ್ಯದಲ್ಲಿ ಏರುಪೇರು: ಭಕ್ತರಲ್ಲಿ ಆತಂಕ

ಆಸ್ಪತ್ರೆಯಲ್ಲಿ ಉನ್ನತ ಚಿಕಿತ್ಸೆಗೆ ನಿರಾಕರಿಸುತ್ತಿರುವ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 20:24 IST
Last Updated 1 ಜನವರಿ 2023, 20:24 IST
ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಭಾನುವಾರ ತೀವ್ರ ಏರುಪೇರಾದ ಸುದ್ದಿ ತಿಳಿದು ಆಶ್ರಮಕ್ಕೆ ಧಾವಿಸಿದ್ದ ಅಪಾರ ಸಂಖ್ಯೆಯ ಭಕ್ತರು –ಪ್ರಜಾವಾಣಿ ಚಿತ್ರ
ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಭಾನುವಾರ ತೀವ್ರ ಏರುಪೇರಾದ ಸುದ್ದಿ ತಿಳಿದು ಆಶ್ರಮಕ್ಕೆ ಧಾವಿಸಿದ್ದ ಅಪಾರ ಸಂಖ್ಯೆಯ ಭಕ್ತರು –ಪ್ರಜಾವಾಣಿ ಚಿತ್ರ   

ವಿಜಯಪುರ: ಅನಾರೋಗ್ಯದಿಂದ ನಿತ್ರಾಣವಾಗಿರುವ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಆರೋಗ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ತೀವ್ರ ಏರುಪೇರಾಗುತ್ತಿರುವುದರಿಂದ ಆತಂಕಕ್ಕೆ ಒಳಗಾದ ಭಕ್ತರು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಮಕ್ಕೆ ಧಾವಿಸಿದ್ದರು.

ಮುಖ್ಯಮಂತ್ರಿ, ಸಚಿವರು, ಶಾಸಕರು, ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡುತ್ತಿರುವುದರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳ ಬಗ್ಗೆ ವದಂತಿಗಳು ಹರಡುತ್ತಿರುವುದರಿಂದ ಭಾನುವಾರ ದಿನವಿಡೀ ಆಶ್ರಮದಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು. ಸಂಜೆ ವೇಳೆಗೆ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾದ ಬಳಿಕ ಎಲ್ಲರೂ ನಿರಾಳರಾದರು.

ಶ್ರೀಗಳಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿರುವ ಬಿ.ಎಲ್.ಡಿ.ಇ ಆಸ್ಪತ್ರೆಯ ಡಾ.ಎಸ್.ಬಿ. ಪಾಟೀಲ್, ಡಾ. ಅರವಿಂದ್ ಪಾಟೀಲ್, ಡಾ.‌ಮಲ್ಲಣ್ಣ ಮೂಲಿಮನಿ ನೇತೃತ್ವದ ವೈದ್ಯರ ತಂಡ ಶ್ರೀಗಳ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ನೀಡಿ, ‘ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಎಲ್‌ಇಡಿ ಪರದೆಯಲ್ಲಿ ದರ್ಶನ:

ಆಶ್ರಮದ ಆವರಣದಲ್ಲಿ ಬೃಹತ್‌ ಎಲ್‌ಇಡಿ ಪರದೆಯನ್ನು ಅಳವಡಿಸಿ ಭಕ್ತರಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೇ, ಆಶ್ರಮದ ಯುಟ್ಯೂಬ್‌ ಚಾನಲ್‌ನಲ್ಲೂ ನೇರ ಪ್ರಸಾರವನ್ನು ಮಾಡಲಾಯಿತು. ಶ್ರೀಗಳನ್ನು ಕಣ್ತುಂಬಿಕೊಂಡ ಭಕ್ತರು ನಿರಾಳರಾದರು. ಆಶ್ರಮಕ್ಕೆ ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸಿದ್ಧೇಶ್ವರ ಶ್ರೀ ಆರೋಗ್ಯದಲ್ಲಿ ಏರುಪೇರು: ಭಕ್ತರಲ್ಲಿ ಆತಂಕ
ಒಂದನೇ ಪುಟದಿಂದ

ಹರಕೆ, ಪೂಜೆ: ‘ಶ್ರೀಗಳು ಬೇಗ ಗುಣಮುಖವಾಗಲಿ, ಮತ್ತೆ ಪ್ರವಚನ ನೀಡಲಿ’ ಎಂದು ಭಕ್ತರು ಹರಕೆ ಹೊತ್ತು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀಗಳೊಂದಿಗೆ ಮೋದಿ ಮಾತು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಗೋವಿಂದ ಕಾರಜೋಳ ಅವರು ಶನಿವಾರ ರಾತ್ರಿ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದು, ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ‘ಪ್ರಲ್ಹಾದ ಜೋಶಿ ಅವರು ಪ್ರಧಾನಿಗೆ ಕರೆ ಮಾಡಿ ಸ್ವಾಮೀಜಿಗಳೊಂದಿಗೆ ಮಾತನಾಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಅವರು ಹೆಚ್ಚಿನ ಚಿಕಿತ್ಸೆ ಒದಗಿಸುವ ಬಗ್ಗೆ ತಿಳಿಸಿದಾಗ ಶ್ರೀಗಳು ಕೈಮುಗಿದು ಚಿಕಿತ್ಸೆ ನಿರಾಕರಿಸಿದರು’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಶ್ರೀಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಲು ಸಿದ್ಧವಿದೆ. ಆದರೆ, ಶ್ರೀಗಳು ಯಾವುದೇ ಚಿಕಿತ್ಸೆ ತೆಗೆದುಕೊಳ್ಳಲು ಒಪ್ಪುತ್ತಿಲ್ಲ’ ಎಂದು
ತಿಳಿಸಿದರು.

ಪ್ರಮುಖರ ಭೇಟಿ: ಆಶ್ರಮಕ್ಕೆ ಭಾನುವಾರ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೊಲ್ಲಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಂಡ್ಯ ಆದಿಚುಂಚನಗುರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ದೇವಾನಂದ ಚವ್ಹಾಣ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಶ್ರೀಗಳ ಯೋಗಕ್ಷೇಮ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.