ADVERTISEMENT

ಶಾಲಾ ಶುಲ್ಕ ವಸೂಲಿ ಬೇಡ: ಹೊರಟ್ಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 16:06 IST
Last Updated 24 ಏಪ್ರಿಲ್ 2020, 16:06 IST

ಹುಬ್ಬಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಬಹುದು ಎಂಬ ಆದೇಶ ದುರುಪಯೋಗ ಆಗಲಿದೆ. ಆದ್ದರಿಂದ, ಮೂರು ತಿಂಗಳ ಕಾಲ ಶುಲ್ಕ ವಸೂಲಿ ಮಾಡಬಾರದು ಎಂಬ ಹಿಂದಿನ ಆದೇಶವನ್ನೇ ಮುಂದುವರೆಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ಗೆ ಪತ್ರ ಬರೆದಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅನುಕೂಲಸ್ಥರಿಂದ ಶುಲ್ಕ ಪಡೆಯಬಹುದು ಎಂಬುದು ಮೇಲ್ನೋಟಕ್ಕೆ ಸರಿ ಎನಿಸಿದರೂ ಅಂತರ್ಗತವಾಗಿ ಈ ಆದೇಶ ದುರುಪಯೋಗ ಆಗಲಿದೆ. ಪೋಷಕರನ್ನು ಬೆಂಕಿಯಿಂದ ಬಾಣಲೆಗೆ ದೂಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂಬಳ ನೀಡುವುದು ಆಡಳಿತ ಮಂಡಳಿಗಳ ಕರ್ತವ್ಯವಾಗಿದೆ. ಸಿಬ್ಬಂದಿಗೆ ಮೂರು ತಿಂಗಳ ವೇತನ ನೀಡದಿರುವಷ್ಟು ಬಡತನ ಆ ಸಂಸ್ಥೆಗಳಿಗಿಲ್ಲ. ಆರ್ಥಿಕವಾಗಿ ಸ್ಥಿತಿವಂತವಾಗಿವೆ. ಬಾಕಿ ಇರುವ ಆರ್‌ಟಿಇ ಮರುಪಾವತಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದರಿಂದ ಸಂಬಳ ನೀಡಲು ಅನುಕೂಲವಾಗುತ್ತದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.