ADVERTISEMENT

ಬಂಡೀಪುರ, ನಾಗರಹೊಳೆಯಲ್ಲಿ ಹಸಿರ ಸಿರಿ

ಬೆಂಕಿ ಧಗಧಗಿಸಿದ ಕಾಡಿನಲ್ಲಿ ಹಸಿರೋತ್ಸವ

​ಪ್ರಜಾವಾಣಿ ವಾರ್ತೆ
Published 9 ಮೇ 2019, 20:00 IST
Last Updated 9 ಮೇ 2019, 20:00 IST
ನಾಗರಹೊಳೆಯ ದಮ್ಮನಕಟ್ಟೆ ವಲಯದಲ್ಲಿ ಚಿಗುರಿದ ಗಿಡಮರಗಳು
ನಾಗರಹೊಳೆಯ ದಮ್ಮನಕಟ್ಟೆ ವಲಯದಲ್ಲಿ ಚಿಗುರಿದ ಗಿಡಮರಗಳು   

ಮೈಸೂರು: ‘ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ; ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ನೆತ್ತರ್ ಒಡಲಿನಲಿ!’ ಎಂಬ ಕುವೆಂಪು ಅವರ ಪದ್ಯ, ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ನೋಡಿದರೆ ಮತ್ತೆ ಮತ್ತೆ ನೆನಪಾಗುತ್ತದೆ.

‌ಕಳೆದ ನಾಲ್ಕು ತಿಂಗಳಿಂದ, ಎಲೆಗಳನ್ನು ಉದುರಿಸಿ ಬೋಳಾಗಿದ್ದ ಈ ಎರಡೂ ಅರಣ್ಯ ಪ್ರದೇಶಗಳೀಗ ಹಸಿರುಟ್ಟು ನಳನಳಿಸುತ್ತಿವೆ.

ಫೆಬ್ರುವರಿ ಕೊನೆಯ ವಾರದಲ್ಲಿ ಬಂಡೀಪುರದ ಗೋಪಾಲಸ್ವಾಮಿಬೆಟ್ಟ ಮತ್ತು ಕುಂದುಕೆರೆ ವಲಯಗಳ 14 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಕಾಳ್ಗಿಚ್ಚಿಗೆ ನಾಶವಾಗಿತ್ತು. ಈಗ, ಅದರ ಗುರುತೇ ಇಲ್ಲದಂತೆ ಹಸಿರು ಮೈದುಂಬಿಕೊಂಡಿರುವ ಕಾಡಿನಲ್ಲಿ ತಿಂಗಳಿನಿಂದ ಈಚೆಗೆ ಸುರಿಯುತ್ತಿರುವ ಮಳೆಯೂ ಹಸಿರು ಹೊದಿಸಲು ನೆರವಾಗಿದೆ.

ADVERTISEMENT

ಕೆರೆ ಕಟ್ಟೆಗಳು ಬಹುತೇಕ ತುಂಬುವ ಹಂತದಲ್ಲಿವೆ. ನಾಗರಹೊಳೆ ಹಸಿರು ಸೀರೆಯುಟ್ಟು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಾಡಿನಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳ ಕಲರವ ಪ್ರವಾಸಿಗರನ್ನು ಮುದ ನೀಡುತ್ತಿವೆ.

ಬಂಡೀಪುರದ ಮೊಳೆಯೂರು, ಬೇಗೂರು, ಗುಂಡ್ರೆ ವಲಯದಲ್ಲಿ 2017ರಲ್ಲಿ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಅರಣ್ಯ ಹೊತ್ತಿ ಉರಿದಿತ್ತು. ಇಲ್ಲೂ ಗಿಡ, ಮರಗಳು ಚಿಗುರೊಡೆದಿವೆ. ಹಲವು ಬಗೆಯ ಕಾಡು ಮರಗಳು ಬೆಳೆದಿವೆ.

ಗೋಪಾಲಸ್ವಾಮಿಬೆಟ್ಟ ವಲಯದ ಕುಳ್ಳನಬೆಟ್ಟ, ಹಿರಿಕೆರೆ, ಮೇಲುಕಾಮನಹಳ್ಳಿ, ಕಲ್ಲಿಗೌಡನಹಳ್ಳಿ, ಬೋಳಗುಡ್ಡ, ಮಾಸ್ತಿಮುಕ್ಕಿ, ಗೋಪಾಲಸ್ವಾಮಿಬೆಟ್ಟ ದಕ್ಷಿಣ ಮತ್ತು ಉತ್ತರ ಬೀಟ್‌ಗಳು, ಕುಂದುಕೆರೆ ವಲಯದ ಬರೆಕಟ್ಟೆ, ಬಾಚಹಳ್ಳಿ, ಕುಂದುಕೆರೆ, ಯಲಚೆಟ್ಟಿ, ಉಪಕಾರ ಕಾಲೊನಿ, ಲೊಕ್ಕೆರೆ ಮತ್ತು ಮಂಗಲ ಬೀಟ್‌ಗಳು ಬೆಂಕಿಗೆ ಆಹುತಿಯಾಗಿದ್ದವು. ಇಲ್ಲಿನ ದೊಡ್ಡ ಮತ್ತು ಮಧ್ಯಮ ಗಾತ್ರದ ಮರಗಳು ಕೆಲವು ರೆಂಬೆಗಳನ್ನು ಕಳೆದುಕೊಂಡರೂ ಸಂಪೂರ್ಣವಾಗಿ ಬೆಂಕಿ ಜ್ವಾಲೆಗೆ ಬಲಿಯಾಗಿರಲಿಲ್ಲ. ಇಲ್ಲಿ ಈಗ ಹಸಿರು ನಳನಳಿಸುತ್ತಿದೆ.

ಬಂಡೀಪುರದಲ್ಲಿ ಬೀಜ ಬಿತ್ತನೆ
ಕಾಳ್ಗಿಚ್ಚಿಗೆ ತುತ್ತಾಗಿದ್ದ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೆ ಹಸಿರು ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದ್ದು, ಪ್ರಾಥಮಿಕವಾಗಿ 25 ಟನ್‌ಗಳಷ್ಟು ವಿವಿಧ ಬೀಜಗಳನ್ನು ಬಿತ್ತುವ ಗುರಿ ಹೊಂದಿದೆ.

ಉತ್ತಮವಾಗಿ ಮಳೆಯಾಗಿರುವುದರಿಂದ ಮೊದಲ ಹಂತದ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಭಾಗದಲ್ಲಿ ಸೆಪ್ಟೆಂಬರ್‌ ನಂತರ ಮತ್ತಷ್ಟು ಉತ್ತಮ ಮಳೆಯಾಗುವುದರಿಂದ ಆಗ ದೊಡ್ಡ ಪ್ರಮಾಣದಲ್ಲಿ ಬೀಜ ಬಿತ್ತನೆ ಮಾಡುವುದಾಗಿ ಬಂಡೀಪುರ ಹುಲಿಯೋಜನೆ ನಿರ್ದೇಶಕ ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

**
ಮುನ್ನೆಚ್ಚರಿಕೆ ಕ್ರಮದಿಂದಾಗಿ, ನಾಗರಹೊಳೆಗೆ ಈ ಬಾರಿ ಬೆಂಕಿ ಬಿದ್ದಿಲ್ಲ. ಮಳೆ ಬೀಳುತ್ತಿರುವುದರಿಂದ ಎಲ್ಲೆಡೆ ಸಾಕಷ್ಟು ಹಸಿರು ಮೂಡಿದೆ.
-ನಾರಾಯಣಸ್ವಾಮಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

**
ಎರಡು ವರ್ಷಗಳ ಹಿಂದೆ ಬಂಡೀಪುರದ ಮೊಳೆಯೂರು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ನಷ್ಟ ಸಂಭವಿಸಿತ್ತು. ಈಗ ಇಲ್ಲೆಲ್ಲ ಮರಗಿಡಗಳು ಚಿಗುರಿವೆ.
-ಪರಮೇಶ್, ಬಂಡೀಪುರದ ಯಡಿಯಾಲ ವಲಯದ ಎಸಿಎಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.