ADVERTISEMENT

ಅರಣ್ಯ ಪ್ರದೇಶ ಹೆಚ್ಚಳ: ಕರ್ನಾಟಕದ ವನ ವಿಸ್ತರಣೆ

ಮೊದಲ ಮೂರು ಸ್ಥಾನದಲ್ಲಿ ದಕ್ಷಿಣದ ರಾಜ್ಯಗಳು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 21:59 IST
Last Updated 30 ಡಿಸೆಂಬರ್ 2019, 21:59 IST
   

ನವದೆಹಲಿ: ಕರ್ನಾಟಕ ರಾಜ್ಯದ ಹಸಿರಿನ ಆವರಣವು ವಿಸ್ತರಿಸಿದೆ. 2017ರಿಂದ 19ರವರೆಗಿನ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶವು 1,025 ಚದರ ಕಿ.ಮೀ.ಗಳಷ್ಟು ಹೆಚ್ಚಿದೆ. ಅತಿ ಹೆಚ್ಚು ಅರಣ್ಯ ವಿಸ್ತರಣೆ ಕಂಡ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು 2019ರ ಭಾರತೀಯ ಅರಣ್ಯ ಸ್ಥಿತಿಗತಿ ವರದಿ ತಿಳಿಸಿದೆ.

ಈ ಅವಧಿಯಲ್ಲಿ ಅರಣ್ಯಪ್ರದೇಶ ಹೆಚ್ಚು ವಿಸ್ತರಣೆ ಕಂಡ ಮೊದಲ ಮೂರು ರಾಜ್ಯಗಳು ದಕ್ಷಿಣ ಭಾರತದ್ದೇ ಆಗಿವೆ. ಆಂಧ್ರಪ್ರದೇಶ (990 ಚ.ಕಿ.ಮೀ.) ಹಾಗೂ ಕೇರಳ (823 ಚ.ಕಿ.ಮೀ) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

‘ಅರಣ್ಯ ಮತ್ತು ಹೊರಗಿನ ಪ್ರದೇಶದಲ್ಲಿ ನಡೆದ ಸಂರಕ್ಷಣಾ ಚಟುವಟಿಕೆಗಳು ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಆಗಿರುವ ಹೆಚ್ಚಳದಿಂದ ಈ ವೃದ್ಧಿ ಸಾಧ್ಯವಾಗಿದೆ’ ಎಂದು ವರದಿ ಹೇಳಿದೆ.

ADVERTISEMENT

‘ಈ ಮೂರೂ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಫಿ, ರಬ್ಬರ್‌ ಹಾಗೂ ತೆಂಗು ಬೆಳೆಯಲಾಗುತ್ತದೆ. ಒಂದು ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಇಂಥ ತೋಟಗಾರಿಕಾ ಬೆಳೆ ಇದ್ದರೆ ಅದನ್ನು ಅರಣ್ಯ ಪ್ರದೇಶ ಎಂದು, ಇದಕ್ಕಿಂತ ಕಡಿಮೆ ಪ್ರದೇಶದಲ್ಲಿ ಇಂಥ ಬೆಳೆ ಇದ್ದರೆ ಅದನ್ನು ಮರಗಳ ದಟ್ಟಣೆಯಿಂದ ಕೂಡಿದ ಪ್ರದೇಶವೆಂದು ಪರಿಗಣಿಸಲಾಗುತ್ತದೆ’ ಎಂದು ಫಾರೆಸ್ಟ್‌ ಸರ್ವೆ ಆಫ್‌ ಇಂಡಿಯಾದ
ಮಹಾ ನಿರ್ದೇಶಕ ಸುಭಾಷ್‌ ಆಶುತೋಷ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಅರಣ್ಯ ಪ್ರದೇಶದವು 3,976 ಚದರ ಕಿ.ಮೀ.ಗಳಷ್ಟು ಮತ್ತು ಮರಗಳ ದಟ್ಟಣೆಯ ಪ್ರದೇಶವು 1,212 ಚ.ಕಿ.ಮೀ ನಷ್ಟು ವಿಸ್ತರಿಸಿದೆ ಎಂದು ವರದಿ ಹೇಳಿದೆ.

*
ದೇಶದ ಶೇ 33ರಷ್ಟು ಭಾಗದಲ್ಲಿ ಅರಣ್ಯ ಮತ್ತು ಮರಗಳನ್ನು ಬೆಳೆಸುವ ಗುರಿಯನ್ನು ತಲುಪಲು ನಮಗೆ ಇನ್ನಷ್ಟು ಕಾಲಾವಕಾಶ ಬೇಕು. 2030ರೊಳಗೆ ಈ ಗುರಿ ತಲುಪಲು ಸಾಧ್ಯವಾಗದು
-ಪ್ರಕಾಶ್‌ ಜಾವಡೇಕರ್‌, ಕೇಂದ್ರದ ಪರಿಸರ ಖಾತೆ ಸಚಿವ

**
ಅತಿ ಹೆಚ್ಚು ಅರಣ್ಯ ಪ್ರದೇಶ ಎಲ್ಲಿ?

*ಮಧ್ಯಪ್ರದೇಶ

*ಅರುಣಾಚಲ ಪ್ರದೇಶ

*ಛತ್ತೀಸಗಡ

*ಒಡಿಶಾ

*ಮಹಾರಾಷ್ಟ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.