
ಕಾಡಿನ ಬೆಂಕಿ ಆರಿಸುವುದರಲ್ಲಿ ನಿರತರಾಗಿದ್ದ ಅರಣ್ಯ ರಕ್ಷಕ (ಸಂಗ್ರಹ ಚಿತ್ರ)
ಬೆಂಗಳೂರು: ಹುಲಿ ಸಂರಕ್ಷಿತ ಪ್ರದೇಶದ ಜತೆಗೆ ಪ್ರಮುಖ ಅರಣ್ಯಗಳಲ್ಲಿ ಬೇಸಿಗೆಯಲ್ಲಿ ಕಾಳ್ಗಿಚ್ಚು ನಿಯಂತ್ರಿಸುವ ಚಟುವಟಿಕೆಗಳನ್ನು ಅರಣ್ಯ ಇಲಾಖೆ ಆರಂಭಿಸಿದೆ. ಆದರೆ, ಬೆಂಕಿ ನಿಯಂತ್ರಿಸಲು ಕೆಲವು ವರ್ಷಗಳಿಂದ ಇಲಾಖೆಯೊಂದಿಗೆ ಕೈಜೋಡಿಸುತ್ತಾ ಬಂದಿರುವ ಪರಿಸರ ಪ್ರೇಮಿಗಳ ಸೇವೆ ಬಳಸಿಕೊಳ್ಳಲು ನಿರ್ಲಕ್ಷ್ಯ ಮಾಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
‘ಬೆಂಕಿಯಿಂದ ಕಾಡನ್ನು ಸಂರಕ್ಷಿಸಲು ಪ್ರಯತ್ನ ಮಾಡುತ್ತಿರುವ ಅರಣ್ಯ ಇಲಾಖೆ ಜತೆಗೆ ನಾವು ಕೈಜೋಡಿಸುತ್ತ ಬಂದಿದ್ದೇವೆ. ನಮ್ಮದೇ ವಾಹನ, ತೈಲ ಬಳಕೆ ಮಾಡಿ ನೆರವು ನೀಡಲು ಸಿದ್ದರಿದ್ದೇವೆ. ಆದರೆ, ಇಲಾಖೆಯ ಕೆಲ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಈ ವರ್ಷ ಇದಕ್ಕೆ ಅಡ್ಡಿಯಾಗುತ್ತಿದೆ’ ಎಂದು ಪರಿಸರ ಆಸಕ್ತ ಬಳಗದ ಪ್ರಮುಖರೊಬ್ಬರು ಬೇಸರ
ವ್ಯಕ್ತಪಡಿಸಿದರು.
ಉದ್ಯಮಿಗಳು, ವ್ಯಾಪಾರಸ್ಥರು, ಎಂಜಿನಿಯರ್‌ಗಳು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಪರಿಸರ, ಅರಣ್ಯದ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದು ಎರಡು ದಶಕದಿಂದಲೂ ಅರಣ್ಯಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಟ್ಟಿತ್ತು. ಅಂತಹ ಸಮಯದಲ್ಲಿ ಕೆಲಸ ಮಾಡಲು ಇಲಾಖೆ ಸಿಬ್ಬಂದಿ ಜತೆಗೆ ಸ್ವಯಂ ಸೇವಕರ ನೆರವು, ವಾಹನಗಳ ಬಳಕೆಗೆ ಅವಕಾಶ ದೊರೆತರೆ ಹೊರೆ ತಗ್ಗಲಿದೆ ಎಂಬ ಉದ್ದೇಶದಿಂದ ಪರಿಸರ ಪ್ರಿಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಇಲಾಖೆಯಿಂದ ಪತ್ರ: ಸಮಾನ ಆಸಕ್ತರೆಲ್ಲರೂ ಒಂದೆಡೆ ಸೇರಿ ತಮ್ಮ ಬಳಿ ಇರುವ ಜೀಪ್‌ಗಳ ಸೇವೆಯನ್ನು ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಒಬ್ಬರು ಜೀಪ್‌ನೊಂದಿಗೆ ಕೆಲಸ ಮಾಡುವ ಇರಾದೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಇದಕ್ಕೆ ಇಲಾಖೆಯೂ ಪೂರಕವಾಗಿ ಸ್ಪಂದಿಸಿತ್ತು.
ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮ, ಬಿಳಿಗಿರಿರಂಗ ಹುಲಿ ಸಂರಕ್ಷಿತ ಪ್ರದೇಶ ಜತೆಗೆ ಬಂಡೀಪುರ ಹಾಗೂ ನಾಗರಹೊಳೆ ಹುಲಿ ಪ್ರದೇಶಗಳಲ್ಲಿ ಇವರ ಸೇವೆ ಬಳಕೆ ಮಾಡಿಕೊಳ್ಳಬಹುದು ಎನ್ನುವ ಪತ್ರ ನೀಡಲಾಗಿತ್ತು.
‘ವನ್ಯಜೀವಿ ವಲಯಗಳಲ್ಲಿ ಇಲಾಖಾ ವಾಹನಗಳ ಜತೆಯಲ್ಲಿ ಹೆಚ್ಚುವರಿಯಾಗಿ ವಾಹನ ಇದ್ದಲ್ಲಿ ಅನುಕೂಲವಾಗಲಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( ವನ್ಯಜೀವಿ) ಅವರ ಆದೇಶಕ್ಕೆ ಅನುಗುಣವಾಗಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸಲು ಅಗತ್ಯ ಸಹಕಾರ ಪಡೆಯಲಾಗುವುದು. ಇದಕ್ಕಾಗಿ 4X4 ಜೀಪ್ ಗುಂಪಿನಿಂದ ವಾಹನಗಳ ಉಪಯೋಗವನ್ನು ಪಡೆಯಲಾಗುವುದು. ಇದರಿಂದ ಇಲಾಖೆಗೆ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ. ಆದರೆ, ನಿಯಮಾವಳಿ ಪಾಲಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಹಕಾರ ನೀಡಲಿ: ಕೋವಿಡ್ ಅವಧಿಯೂ ಸೇರಿದಂತೆ ಪ್ರತಿ ವರ್ಷ ಪತ್ರ ಪಡೆದು ಪರಿಸರ ಪ್ರಿಯರು ಮೂರ್ನಾಲ್ಕು ತಿಂಗಳು ಕೆಲಸ ಮಾಡಿದ್ದಾರೆ. ಈ ವರ್ಷ ಪತ್ರ ಸ್ವೀಕರಿಸಿದರೂ ಕೆಲವು
ಕಡೆಗಳಲ್ಲಿ ಅಸಹಕಾರ ತೋರಿಸುತ್ತಿರುವ ಬಗ್ಗೆ ಅರಣ್ಯ ಸಚಿವರು ಹಾಗೂ
ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
‘ಪ್ರಮುಖ ಅರಣ್ಯ ವಲಯಗಳ ವ್ಯಾಪ್ತಿಯ ಅಧಿಕಾರಿಗಳು ಹಿಂದೆ ಸಹಕಾರ ನೀಡುತ್ತಿದ್ದರು. ಅವರು ನೀಡಿದ ಎಲ್ಲ ಸೂಚನೆಗಳನ್ನು ಪಾಲಿಸಿ ಸೇವೆ ನೀಡಿದ್ದೇವೆ. ಈ ಬಾರಿ ಇಲಾಖೆ ಸಿಬ್ಬಂದಿಯಿಂದ ವಾಹನಗಳಿಗೆ ಬೇಡಿಕೆಯಿದ್ದರೂ ಕೆಲ ಅಧಿಕಾರಿಗಳು ಬೆಂಬಲ ನೀಡುತ್ತಿಲ್ಲ. ಮೊದಲೇ ತಿಳಿಸಿದರೆ ರಜೆ ಯೋಜಿಸಿಕೊಂಡು ಅರಣ್ಯ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ. 500ಕ್ಕೂ ಹೆಚ್ಚು ಮಂದಿ ಜೀಪ್ ಮಾಲೀಕರು ಇದಕ್ಕೆ ಸಿದ್ದರಿದ್ದಾರೆ. ಇಲಾಖೆ ಹಿಂದಿನ ವರ್ಷಗಳಂತೆ ಗಟ್ಟಿಯಾಗಿ ನಿಂತರೆ ನಾವು ಇದಕ್ಕೆ ಸಿ್ಧ ರಿದ್ದೇವೆ’ ಎಂದು 4X4 ಬಳಗದ ಸದಸ್ಯರು ಹೇಳಿದರು.
ಅರಣ್ಯ ಇಲಾಖೆ ಜತೆ ಸೇರಿ ಕೆಲಸ ಮಾಡಲು ಕೆಲವು ಷರತ್ತು ಆಧರಿಸಿ ಪತ್ರ ನೀಡಲಾಗುತ್ತದೆ. ಬೆಂಕಿ ನಿಯಂತ್ರಣಕ್ಕೆ ಹಲವರು ಸಹಕರಿಸಿದ್ದಾರೆ. ಸಮನ್ವಯದ ಕೊರತೆ ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆಕುಮಾರ ಪುಷ್ಕರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ( ವನ್ಯಜೀವಿ)
ಅರಣ್ಯ ಬೆಂಕಿ ತಡೆ: ತಗ್ಗಿದ ಅನುದಾನ ಪ್ರಮಾಣ
ಕೇಂದ್ರ ಪ್ರಾಯೋಜಿತ ಅರಣ್ಯ ಬೆಂಕಿ ತಡೆ ಮತ್ತು ನಿರ್ವಹಣೆ ಯೋಜನೆ ಅಡಿ ಶೇ 60ರಷ್ಟು ಕೇಂದ್ರ ಹಾಗೂ ಶೇ 40ರಷ್ಟು ರಾಜ್ಯದ ಅನುದಾನದಲ್ಲಿ ಕಾಡಿನ ಬೆಂಕಿ ನಿಗ್ರಹಿಸುವ ಚಟುವಟಿಕೆ ಅನುಷ್ಠಾನಗೊಳಿಸಲಾಗುತ್ತದೆ. ಪ್ರತಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ತಲಾ ₹1 ಕೋಟಿವರೆಗೂ ಅನುದಾನ ಸಿಗುತ್ತಿತ್ತು.
ಆದರೆ, ಕೇಂದ್ರ ಸರ್ಕಾರ ಹುಲಿ ಸಂರಕ್ಷಿತ ಪ್ರದೇಶಗಳಿಗೆ ನೀಡುತ್ತಿದ್ದ ಅನುದಾನವನ್ನು ಶೇ 50ರಷ್ಟು ಕಡಿತ ಮಾಡಿದ್ದು, ಇದರಲ್ಲಿ ಕಾಡಿನ ಬೆಂಕಿ ನಿರ್ವಹಣೆಯೂ ಸೇರಿದೆ. ಇದರಿಂದ ಈಗ ಈ ಚಟುವಟಿಕೆಗಳಿಗೆ ಅನುದಾನ ಕೊರತೆ ಆಗುತ್ತಿದೆ.
‘ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಪರಿಸರ ಪ್ರವಾಸೋದ್ಯಮದಿಂದ ಬರುತ್ತಿದ್ದ ಆದಾಯವನ್ನು ಫೌಂಡೇಷನ್ ಮೂಲಕ ಇಲ್ಲಿಯೇ ಬಳಸಲಾಗುತ್ತಿತ್ತು. ಮೂರು ತಿಂಗಳಿನಿಂದ ಸಫಾರಿ ಬಂದ್ ಆಗಿರುವುದರಿಂದ ಸ್ಥಳೀಯ ಅನುದಾನ ಲಭ್ಯತೆ ಪ್ರಮಾಣ ತಗ್ಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.