ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಇರುವ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯ ಹೊಂದಿರುವ 51 ಎಕರೆಗೂ ಅಧಿಕ ಅರಣ್ಯ ಭೂಮಿ ಅತಿಕ್ರಮಣ ತೆರವುಗೊಳಿಸಲು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಒತ್ತುವರಿ ತೆರವಿಗೆ ಆದೇಶಿಸಿ ಬೆಂಗಳೂರು ಗ್ರಾಮಾಂತರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾವಕನಹಳ್ಳಿ ಗೇಟ್, ದೇವನಹಳ್ಳಿ ತಾಲ್ಲೂಕು) ನೀಡಿದ್ದ ನೋಟಿಸ್ ಪ್ರಶ್ನಿಸಿ ‘ಮೆಸರ್ಸ್ ಪ್ರಕೃತಿ ಸೆಂಚುರಿ ಪ್ರಾಪರ್ಟಿಸ್’ನ ಅಧಿಕೃತ ಪ್ರತಿನಿಧಿ ಎಸ್.ಚೇತನ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
‘ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಭೂವನ ಹಳ್ಳಿ ವ್ಯಾಪ್ತಿಯ ಚಿಕ್ಕಸಣ್ಣೆ ಗ್ರಾಮದಲ್ಲಿ ಕಾಯ್ದಿಟ್ಟ ರಾಜ್ಯ ಅರಣ್ಯ ಪ್ರದೇಶದಲ್ಲಿನ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 51 ಎಕರೆ 4 ಗುಂಟೆ ಜಮೀನು ಒತ್ತುವರಿಯಾಗಿದ್ದು ಈ ಜಮೀನನ್ನು ಕರ್ನಾಟಕ ಅರಣ್ಯ ಕಾಯ್ದೆ–1963ರ ಕಲಂ 64ಎ ಅನುಸಾರ ತೆರವುಗೊಳಿಸಬೇಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿವಾದಿಗಳಿಗೆ ನೋಟಿಸ್ ನೀಡಿದ್ದರು.
ಈ ನೋಟಿಸ್ ಅನ್ನು ಪ್ರತಿವಾದಿಗಳಾದ ಚಿಕ್ಕಸಣ್ಣೆ ಗ್ರಾಮದ ಎಂ.ಎ.ಮೊಹಮದ್ ಸನಾವುಲ್ಲಾ ಬಿನ್ ಎಂ.ಅಬ್ದುಲ್ ಸಾಬ್, ಎಂ.ಎ.ಸನಾವುಲ್ಲಾ ಬಿನ್ ಎಂ.ಅಬ್ದುಲ್ಲಾ, ಮೊಹಮದ್ ಅತಾವುಲ್ಲಾ ಬಿನ್ ಅಬ್ದುಲ್ಲಾ, ಎಂ.ಎ.ಮೊಹಮದ್ ಖಲೀಲುಲ್ಲಾ ಬಿನ್ ಅಬ್ದುಲ್ಲಾ ಪ್ರಶ್ನಿಸಿದ್ದರು. ಅಂತೆಯೇ, ’ಈ ಜಮೀನನ್ನು ನಾವು ನೋಂದಾಯಿತ ಪಾಲುದಾರಿಕಾ ವ್ಯವಹಾರ ಸಂಸ್ಥೆಯ ಅಡಿಯಲ್ಲಿ 2007ರ ಜುಲೈನಿಂದ ಈಚೆಗೆ ವಿವಿಧ ದಿನಾಂಕಗಳಲ್ಲಿ, ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಇನ್‌ಫ್ಯಾಂಟ್ರಿ ರಸ್ತೆ ನಿವಾಸಿ ಮೊಹಮದ್ ಶೋಯೆಬ್ ಬಿನ್ ಮೊಹಮದ್ ಇಕ್ಬಾಲ್ (52) ಮತ್ತೊಂದು ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿದ್ದರು.
ಎರಡೂ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಅವರು ಮಂಡಿಸಿದ ವಾದವನ್ನು ಪುರಸ್ಕರಿಸಿದ್ದು, ಅರ್ಜಿದಾರರ ಮನವಿಯನ್ನು ವಜಾಗೊಳಿಸಿದೆ. ಸರ್ಕಾರ ಕಾಲಮಿತಿಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ತೀರ್ಪು ಪ್ರಕಟಿಸಿದೆ.
ಸಾವಿರ ಕೋಟಿ ರೂಪಾಯಿಗಳಿಗೂ ಮಿಗಿಲಾದ ಮೌಲ್ಯ ಹೊಂದಿದ ಈ ಜಮೀನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಣ್ಣಳತೆಯಲ್ಲಿ ಇದ್ದು, ಇಲ್ಲೀಗ ‘ಸೆಂಚುರಿ ಸ್ಪೋರ್ಟ್ಸ್ ವಿಲೇಜ್’ ಹೆಸರಿನಲ್ಲಿ 700 ನಿವೇಶನಗಳ ನಿವಾಸಿ ಲೇ ಔಟ್ ನಿರ್ಮಾಣ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.