ADVERTISEMENT

ಜಾತಿ ಸಂಘಗಳಿಗೆ ಅರಣ್ಯ ಭೂಮಿ; ಆದೇಶ ವಾಪಸ್‌ಗೆ ಮೀನಮೇಷ

ಚಿರಂಜೀವಿ ಕುಲಕರ್ಣಿ
Published 1 ಜನವರಿ 2026, 21:13 IST
Last Updated 1 ಜನವರಿ 2026, 21:13 IST
<div class="paragraphs"><p> ಅರಣ್ಯ </p></div>

ಅರಣ್ಯ

   

ಬೆಂಗಳೂರು: ಜಾತಿ ಆಧಾರಿತ ಸಂಘಟನೆಗಳು ಹಾಗೂ ಐದು ಸರ್ಕಾರಿ ಸಂಸ್ಥೆಗಳಿಗೆ ನಗರದ ಹೊರವಲಯದಲ್ಲಿನ 78 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆ (ಲೀಸ್‌) ನೀಡಿದ್ದ ಸರ್ಕಾರ, ಆದೇಶ ಹಿಂಪಡೆಯಬೇಕಾದ ಮುಜುಗರದಿಂದ ತಪ್ಪಿಸಿಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿದೆ.

ಅರಣ್ಯ ಭೂಮಿಯ ಬಳಕೆ ಮತ್ತು ಹಂಚಿಕೆ ವಿಷಯದಲ್ಲಿ ಗೋದಾವರ್ಮನ್‌ ಪ್ರಕರಣವೂ ಸೇರಿದಂತೆ  ಹಲವು ಪ್ರಕರಣಗಳ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಈ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. 2017ರಲ್ಲಿ ಅಸ್ತಿತ್ವದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ವಿವಿಧ ಜಾತಿ ಸಂಘಟನೆಗಳಿಗೆ ಅರಣ್ಯ ಭೂಮಿಯನ್ನು 30 ವರ್ಷಗಳಿಗೆ ಗುತ್ತಿಗೆ ನೀಡಿತ್ತು. 

ADVERTISEMENT

ಹಂಚಿಕೆ ಮಾಡಲಾಗಿರುವ ಭೂಮಿಯನ್ನು ವಾಪಸ್ ಪಡೆಯುವ ಈ ವಿಷಯ ಸಚಿವ ಸಂಪುಟ ಮುಂದೆ ಕನಿಷ್ಠ ಎರಡು ಬಾರಿ ಬಂದಿದ್ದು, ಎರಡು ಬಾರಿಯೂ ಮುಂದೂಡಿಕೆಯಾಗಿದೆ. ಸಮುದಾಯಗಳಿಗೆ ತಾನೇ ಹಂಚಿಕೆ ಮಾಡಿರುವ ಭೂಮಿಯನ್ನು ವಾಪಸ್‌ ಪಡೆದರೆ ಮುಜುಗರ, ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಈ ವಿಷಯದಲ್ಲಿ ಹಿಂದೇಟು ಹಾಕುತ್ತಿದೆ. ಹೀಗಾಗಿ, ಪ್ರತಿಬಾರಿಯೂ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳದೇ ಮುಂದೂಡಲಾಗುತ್ತಿದೆ ಎನ್ನಲಾಗಿದೆ. 

ಚರ್ಚೆಗೆ ಕಾರಣವಾಗಿದ್ದ ಹಂಚಿಕೆ:

ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಮಾಚೋಹಳ್ಳಿ ಗ್ರಾಮದ ಸರ್ವೆ ನಂಬರ್‌ 81ರಲ್ಲಿ ಇರುವ ಜಮೀನನನ್ನು ಪ್ರತಿ ಎಕರೆಗೆ ₹1 ಲಕ್ಷದಂತೆ 2017ರಲ್ಲಿ ಸರ್ಕಾರ ಲೀಸ್‌ಗೆ ನೀಡಿತ್ತು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮೊದಲು, ಬಹುಕೋಟಿ ಬೆಲೆಬಾಳುವ ಜಮೀನನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ನೀಡಿದ್ದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. 

ಜಾತಿ ಆಧಾರಿತ ಸಂಘಟನೆಗಳು, ಮಠ ಸೇರಿ 36 ಸಂಸ್ಥೆಗಳಿಗೆ ತಲಾ ಎರಡೂವರೆ ಎಕರೆ ಅಥವಾ ಅದಕ್ಕಿಂತ ಹೆಚ್ಚು ಭೂಮಿ ಹಂಚಿಕೆ ಮಾಡಲಾಗಿತ್ತು. ಕೆಲ ಸಂಸ್ಥೆಗಳಿಗೆ 1ರಿಂದ 2 ಎಕರೆ ನೀಡಲಾಗಿತ್ತು. ಒಟ್ಟು 58.5 ಎಕರೆ ಭೂಮಿಯನ್ನು ಇಂತಹ ಸಂಘಟನೆಗಳಿಗೆ ಮಂಜೂರು ಮಾಡಲಾಗಿದೆ. 19.5 ಎಕರೆಯನ್ನು ಸಾರ್ವಜನಿಕ ಉದ್ದೇಶಗಳಿಗೆ ಹಂಚಿಕೆ ಮಾಡಲಾಗಿತ್ತು. ನೈಸ್ ರಸ್ತೆ ವೃತ್ತದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಈ ಭೂಮಿ, ವೇಗವಾಗಿ ಬೆಳೆಯುತ್ತಿರುವ ರಿಯಲ್‌ ಎಸ್ಟೇಟ್ ಮಾರುಕಟ್ಟೆಯಲ್ಲಿ ಅತ್ಯಂತ ಲಾಭದಾಯಕ ಪ್ರದೇಶವಾಗಿದೆ. 

ಹೀಗೆ ಜಮೀನು ಹಂಚಿಕೆ ಮಾಡಿದ ಪ್ರಕರಣ 2018ರ ಜನವರಿಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರು, ‘1896ರಲ್ಲೇ ಆಗಿನ ಮೈಸೂರು ಮಹಾರಾಜರು ಈ ಭೂಮಿಯನ್ನು ಅರಣ್ಯವೆಂದು ಘೋಷಿಸಿದ್ದು, ಅದು ಮೀಸಲು ಅರಣ್ಯವಾಗಿದೆ. ಸಾವಿರಾರು ಮರಗಳು ನಿಗದಿತ ಸರ್ವೆ ನಂಬರ್‌ನಲ್ಲಿ ಇವೆ’ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದರು. ಪ್ರಕರಣದ ವಿಚಾರಣೆಯ ಪರಿಣಾಮವಾಗಿ, ಸಂಸ್ಥೆಗಳು ಹಂಚಿಕೆಯಾಗಿದ್ದ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

‘2019ರಲ್ಲಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ, ವಿಷಯವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿತ್ತು. ನಂತರ ‘ಮಾಚೋಹಳ್ಳಿ ಗ್ರಾಮದ ಸರ್ವೆ ನಂಬರ್‌ 81ರ ಭೂಮಿ ಇನ್ನೂ ಅರಣ್ಯವಾಗಿಯೇ ಉಳಿದಿದೆ. 46.31 ಎಕರೆಯನ್ನು ಕೆಲವರು ಒತ್ತುವರಿ ಮಾಡಿದ್ದಾರೆ’ ಎಂದು ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ, ತಾನು ಹಿಂದೆ ಗುತ್ತಿಗೆ ನೀಡಿದ್ದ ಆದೇಶವನ್ನು ರದ್ದುಪಡಿಸುವ ಕುರಿತು ಹೈಕೋರ್ಟ್‌ಗೆ ಖಚಿತ ಮಾಹಿತಿ ನೀಡಿಲ್ಲ. ಹೈಕೋರ್ಟ್‌ ಪ್ರಶ್ನೆಗಳಿಗೆ ಉತ್ತರಿಸದೆ ಮೌನ ಕಾಯ್ದುಕೊಂಡಿದೆ’ ಎಂದು ಆರೋಪಿಸಲಾಗಿದೆ.

‘ಗೋದಾವರ್ಮನ್‌ ಪ್ರಕರಣ ಸೇರಿದಂತೆ ಅರಣ್ಯ ಭೂಮಿಯ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನಗಳಿಗೆ ವಿರುದ್ಧವಾಗಿ ಗುತ್ತಿಗೆ ನೀಡಲಾಗಿದೆ. ಈ ಪ್ರದೇಶದ ಸುತ್ತಲ ಭೂಮಿ ಬಡಾವಣೆಗಳಾಗಿ ಅಭಿವೃದ್ಧಿಯಾಗಿವೆ. ಭೂಮಿಯನ್ನು ಇದುವರೆಗೂ ಸರ್ಕಾರ ಡಿನೋಟಿಫೈ ಮಾಡಿಲ್ಲ. ಇಂತಹ ಹಸಿರು ಪ್ರದೇಶವನ್ನು ಕಳೆದುಕೊಳ್ಳಬಾರದು’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯಾಧಿಕಾರಿ. 

ಎಲ್ಲಾ ದಾಖಲೆಗಳನ್ನು ಸಚಿವ ಸಂಪುಟದ ಮುಂದೆ ಇಡಲಾಗಿದೆ. ಈ ಪ್ರದೇಶ ಅರಣ್ಯ ಎನ್ನುವ ಇಲಾಖೆಯ ನಿಲುವು ಸ್ಪಷ್ಟವಾಗಿದೆ. ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಪ್ರತಿಕ್ರಿಯೆ ನೀಡಲು ಆಗದು
ಈಶ್ವರ ಖಂಡ್ರೆ ಅರಣ್ಯ ಸಚಿವ

ಅರಣ್ಯ ಭೂಮಿ ಪಡೆದ ಸಂಸ್ಥೆಗಳು

l ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ

l ಕುರುಬರ ಸಂಘ

l ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ

l ವೀರಶೈವ ಮಹಾಸಭಾ 

l ಒಕ್ಕಲಿಗರ ಸಂಘ

l ಆರ್ಯ ಈಡಿಗರ ಸಂಘ

l ಉಪ್ಪಾರ ಸಂಘ

l ವಿವಿಧ ದಲಿತ ಸಂಘಟನೆಗಳು

l ಸರ್ಕಾರಿ ಸಂಸ್ಥೆಗಳು

ಹಿಂದೆಯೂ ಬೇಡಿಕೆ ತಿರಿಸ್ಕರಿಸಲಾಗಿತ್ತು

ವಿವಿಧ ಸಂಸ್ಥೆಗಳಿಗೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡುವ ಒಂದು ವರ್ಷದ ಹಿಂದೆಯಷ್ಟೇ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ‘ಇದು ಅರಣ್ಯ ಭೂಮಿ ಬೆಲೆ ಬಾಳುವ ಭೂಮಿಯನ್ನು ಯಾವುದೇ ಸಂಸ್ಥೆಗಳಿಗೆ ನೀಡಲು ಅವಕಾಶ ಇಲ್ಲ’ ಎಂದು ಲಿಖಿತ ಉತ್ತರ ನೀಡಿದ್ದರು. ಭೂ ಮಂಜೂರಾತಿಗೆ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯನ್ನು 2009ರಲ್ಲಿ ತಿರಸ್ಕರಿಸಿದ್ದ ಬೆಂಗಳೂರು ವಿಶೇಷ ಉಪ ಆಯುಕ್ತರು ‘ಮಾಚೋಹಳ್ಳಿಯ ಜಮೀನು ಅರಣ್ಯ ಭೂಮಿ. ಡಿನೋಟಿಫಿಕೇಷನ್‌ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

- ಅಂದಾಜು ಮೌಲ್ಯ ₹2500 ಕೋಟಿ 

ಮಾಚೋಹಳ್ಳಿಯ ಅರಣ್ಯ ಭೂಮಿ ಭಾರಿ ಬೆಲೆ ಬಾಳುತ್ತದೆ. ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ಕೃಷಿ ಭೂಮಿಯೇ ಎಕರೆಗೆ ₹5 ಕೋಟಿಯಿಂದ ₹15 ಕೋಟಿ ದರಕ್ಕೆ ಮಾರಾಟವಾಗುತ್ತಿದೆ. ಮಾಗಡಿ ರಸ್ತೆಗೆ ನೇರವಾಗಿ ಹೊಂದಿಕೊಂಡಿರುವ ಅರಣ್ಯ ಭೂಮಿ ಸುತ್ತಲ ವಸತಿ ನಿವೇಶನ ಗಳಿಗೆ ಸಾಕಷ್ಟು ಬೇಡಿಕೆ ಇದೆ. ಚದರ ಅಡಿಗೆ ₹8000ರಿಂದ ₹13000ದವರೆಗೆ ಮಾರಾಟವಾಗುತ್ತಿವೆ. ಅರಣ್ಯ ಭೂಮಿಯ ಮೌಲ್ಯ ₹2500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.